ಪುತ್ತೂರು: ಮಹಾ ಶಿವರಾತ್ರಿಯ ಹಿನ್ನೆಲೆಯಲ್ಲಿ ಶುಕ್ರವಾರ ಭಕ್ತರು ವ್ರತಾಚರಣೆ, ಜಾಗರಣೆಯ ಜತೆಗೆ ಶಿವ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಶಿವರಾತ್ರಿಯ ಉಪವಾಸ ವ್ರತಾಚರಣೆ ಪಾಲನೆ ಮಾಡಿದ ಭಕ್ತರು ಬೆಳಗ್ಗಿನಿಂದಲೇ ದೇವಾಲಯಗಳಿಗೆ ತೆರಳಿ ಭಕ್ತಿ ಭಾವದಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ರಾತ್ರಿ ಭಜನೆ, ಜಾಗರಣೆಗಳನ್ನು ನಡೆಸಿ ಶಿವರಾತ್ರಿಯನ್ನು ಆಚರಿಸಿದರು.
ಭಕ್ತ ಸಾಗರ
ಸೀಮೆಯ ದೇವಾಲಯ ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಬೆಳಗ್ಗೆ ಶಿವರಾತ್ರಿಯ ವಿಶೇಷವಾಗಿ ಶತರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ, ಸಂಜೆ ಭಜನೆ, ರಾತ್ರಿ ಶ್ರೀ ದೇವರು ಬಲಿ ಹೊರಟು ಒಳಾಂಗಣದಲ್ಲಿ ಸಾಂಪ್ರದಾಯಿಕ ಸುತ್ತು ಬಲಿ ನಡೆದು ಹೊರಾಂಗಣದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆಯಿತು. ಬಳಿಕ ದೇವರ ಚಂದ್ರಮಂಡಲ ಉತ್ಸವ, ಅನಂತರ ಮುತ್ತು ಬೆಳೆದ ಕೆರೆಯಲ್ಲಿ ಕೆರೆ ಆಯನ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಉತ್ಸವ ನಡೆಯುವ ಸಂದರ್ಭ ದೇವಾಲಯದ ಒಳಾಂಗಣದಲ್ಲಿ ಮಹಾ ಶಿವರಾತ್ರಿ ವ್ರತಾಚರಣೆಯಲ್ಲಿರುವ ಭಕ್ತರಿಂದ ಸಹಸ್ರ ಪ್ರದಕ್ಷಿಣೆ ಸೇವೆ ನಡೆಯಿತು.ಬನ್ನೂರು ಕುಂಟ್ಯಾನ ಸದಾಶಿವ ದೇವಸ್ಥಾನ, ಗಯಾಪದ ಕ್ಷೇತ್ರ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯ, ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ, ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನ ಮೊದಲಾದ ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು.