ಕೊಯಮತ್ತೂರು: ಈಶಾದಿಂದ ಮಹಾ ಶಿವರಾತ್ರಿಯನ್ನು ಸಂಗೀತ ಮತ್ತು ನೃತ್ಯ ಪ್ರದರ್ಶನದ ಮೂಲಕ ಶ್ರದ್ಧಾಭಕ್ತಿಯಿಂದ ಆಚರಿಸ ಲಾಯಿತು. ಆದಿಯೋಗಿಯ ಸಮ್ಮುಖದಲ್ಲಿ ತಲ್ಲೀನಗೊಳಿಸುವ ಧ್ಯಾನದೊಂದಿಗೆ ಜರಗಿದ ಶಿವರಾತ್ರಿ ಯಲ್ಲಿ ಮಾತನಾಡಿದ ಸದ್ಗುರುಗಳು, ಈ ರಾತ್ರಿ ಕೇವಲ ಜಾಗರಣೆಯ ರಾತ್ರಿಯಾಗದೆ, ಜಾಗೃತಿಯ ರಾತ್ರಿ ಯಾಗಲಿ ಎಂದರು.
ಎಲ್ಲ ರೀತಿಯ ಕೊರೊನಾ ಮುಂಜಾ ಗರೂಕತಾ ಕ್ರಮಗಳೊಂದಿಗೆ ಜರಗಿದ ಕಾರ್ಯಕ್ರಮದಲ್ಲಿ ಸದ್ಗುರುಗಳನ್ನು ಅದ್ದೂರಿಯಾಗಿ ಸ್ವಾಗತಿಸಿ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಮೊದಲು ಈಶಾ ಯೋಗ ಕೇಂದ್ರದಲ್ಲಿ- ಲಿಂಗ ಭೈರವಿ ಮಹಾಯಾತ್ರೆ ಮತ್ತು ಸದ್ಗುರುಗಳು ಪಂಚಭೂತ ಕ್ರಿಯೆಯನ್ನು ನಡೆಸಿಕೊಟ್ಟರು. ಸದ್ಗುರುಗಳು ಒಂದು ಸಸಿಯನ್ನು ನೆಟ್ಟು ಮಹಾಯೋಗ ಜ್ಯೋತಿಯನ್ನು ಬೆಳಗಿದರು. ಲಕ್ಷಾಂತರ ಈಶಾ ಸ್ವಯಂಸೇವಕರು (ಯೋಗ ವೀರರು) ಯೋಗದ ಸರಳ ಸ್ವರೂಪವನ್ನು ಸಾಧ್ಯವಾದಷ್ಟು ಜನರಿಗೆ ಕಲಿಸಲು ಪ್ರತಿಜ್ಞೆ ಕೈಗೊಂಡರು.
ಈಶಾದ ದೇಸೀ ಸಂಗೀತ ವೃಂದ ಸೌಂಡ್ಸ್ ಆಫ್ ಈಶಾ ಮತ್ತು ಈಶಾ ಸಂಸ್ಕೃತಿಯ ವಿದ್ಯಾರ್ಥಿಗಳು ವರ್ಣರಂಜಿತ ಕಾರ್ಯಕ್ರಮ ನೀಡಿದರು. ಸದ್ಗುರು ಜತೆಗಿನ ಮಧ್ಯರಾತ್ರಿ ಧ್ಯಾನ, ಸತ್ಸಂಗ ಹಾಗೂ ಪ್ರಶ್ನೋತ್ತರಗಳು ಪ್ರೇಕ್ಷಕರನ್ನು ಹಿಡಿದಿಟ್ಟಿವೆ. ಅದ್ಭುತ ಧ್ವನಿ ಮತ್ತು ಬೆಳಕಿನ ಪ್ರದರ್ಶನವಾದ ಅದಿಯೋಗಿ ದಿವ್ಯ ದರ್ಶನ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಕಾರ್ಯಕ್ರಮವನ್ನು ನೂರಾರು ಚಾನೆಲ್‌ಗಳು ಮತ್ತು ವೆಬ್‌ಸೈಟ್ ಮೂಲಕ ನೇರ ಪ್ರಸಾರ ಮಾಡಲಾಯಿತು. ಇಂಗ್ಲಿಷ್ ಮತ್ತು 11 ಭಾರತೀಯ ಭಾಷೆಗಳಲ್ಲದೆ, ನೇಪಾಳಿ, ರಷ್ಯನ್, ಫ್ರೆಂಚ್, ಪೋರ್ಚುಗೀಸ್, ಸಾಂಪ್ರದಾಯಿಕ ಚೈನೀಸ್ ಮತ್ತು ಸರಳೀಕೃತ ಚೈನೀಸ್ ಭಾಷೆಗಳಲ್ಲಿಯೂ ಪ್ರಸಾರ ಮಾಡಲಾಗಿದೆ.