ಮುಂಬಯಿ : ಜೈಲಿನಲ್ಲಿರುವ ಎನ್‌ಸಿಪಿ ನಾಯಕ ಮತ್ತು ಮಾಜಿ ಸಚಿವ ನವಾಬ್ ಮಲಿಕ್ ದೇಶ ವಿರೋಧಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಗುರುವಾರ ಪುನರುಚ್ಚರಿಸಿದ್ದು ಪ್ರತಿಪಕ್ಷಗಳ ವಿರುದ್ಧ ಈ ಹಿಂದೆ ಮಾಡಿದ್ದ ಹೇಳಿಕೆಯನ್ನು ಹಿಂಪಡೆಯಲು ನಿರಾಕರಿಸಿದ್ದಾರೆ.
ದೇಶವಿರೋಧಿ ವ್ಯಕ್ತಿಯನ್ನು ದೇಶವಿರೋಧಿ ಎಂದು ಕರೆಯುವುದು ಅಪರಾಧವಾದರೆ, ಅದನ್ನು 50 ಬಾರಿ ಹೇಳುತ್ತೇನೆ ಎಂದರು.
ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ ವರ್ಷ ಬಂಧನಕ್ಕೊಳಗಾಗಿ ಮಲಿಕ್ ಜೈಲಿನಲ್ಲಿದ್ದಾರೆ.
ಪ್ರತಿಪಕ್ಷದ ಶಾಸಕರನ್ನು ದೇಶವಿರೋಧಿಗಳು ಎಂದು ಉಲ್ಲೇಖಿಸಿದ ಆರೋಪದ ಮೇಲೆ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಅವರು ವಿಶೇಷ ಹಕ್ಕು ಉಲ್ಲಂಘನೆ ನೋಟಿಸ್ ಸಲ್ಲಿಸಿದ ಒಂದು ದಿನದ ನಂತರ ಶಿಂಧೆ ಅವರು ರಾಜ್ಯ ವಿಧಾನ ಪರಿಷತ್ತಿನಲ್ಲಿ ಮಾತನಾಡಿದರು.
ಭಾನುವಾರ, ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನದ ಮುನ್ನಾದಿನದಂದು, ಮುಖ್ಯಮಂತ್ರಿ ಆಯೋಜಿಸಿದ್ದ ಸಾಂಪ್ರದಾಯಿಕ ಚಹಾಕೂಟವನ್ನು ಪ್ರತಿಪಕ್ಷಗಳು ಬಹಿಷ್ಕರಿಸಿದ್ದವು. ನಂತರ, ಪ್ರತಿಪಕ್ಷಗಳ ಬಹಿಷ್ಕಾರವನ್ನು ಉಲ್ಲೇಖಿಸಿ, ಶಿಂಧೆ ಅವರು ದೇಶವಿರೋಧಿಗಳ ಜೊತೆ ಚಹಾ ಸೇವಿಸುವುದು ಉಳಿಯಿತು ಎಂದು ಹೇಳಿದರು. ಕೆಲವರಿಗೆ ಭಯೋತ್ಪಾದಕ ದಾವೂದ್ ಇಬ್ರಾಹಿಂ ಜತೆ ನಂಟು ಇರುವುದರಿಂದ ಪ್ರತಿಪಕ್ಷಗಳು ಟೀ ಪಾರ್ಟಿಗೆ ಬರದಿರುವುದು ಒಳ್ಳೆಯದು ಎಂದು ಹೇಳಿದ್ದರು.
ಅವರ ಹೇಳಿಕೆಯಿಂದ ಕೆರಳಿದ ಪ್ರತಿಪಕ್ಷಗಳು ಶಿಂಧೆ ವಿರುದ್ಧ ಕೌನ್ಸಿಲ್ ಉಪಸಭಾಪತಿ ನೀಲಂ ಗೊರ್ಹೆ ಅವರ ಕಚೇರಿಗೆ ವಿಶೇಷ ಹಕ್ಕು ಉಲ್ಲಂಘನೆಯ ನೋಟಿಸ್ ಸಲ್ಲಿಸಿದವು.
ಈ ಕುರಿತು ಮೇಲ್ಮನೆಯಲ್ಲಿ ಮಾತನಾಡಿದ ಶಿಂಧೆ, ”1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ ನೊಂದಿಗೆ ನಂಟು ಹೊಂದಿರುವ ನವಾಬ್ ಮಲಿಕ್ ಅಕ್ರಮವಾಗಿ ಭೂಮಿ ಖರೀದಿಸಿದ್ದಾರೆ ಎಂದು ಸ್ವೀಕರಿಸಿದ ಮಾಹಿತಿ ಸೂಚಿಸುತ್ತದೆ. ದಾವೂದ್ ಇಲ್ಲಿ ಜನರನ್ನು ಕೊಂದಿದ್ದಲ್ಲದೆ ನಮ್ಮ ದೇಶದ ವಿರುದ್ಧ ಭಯೋತ್ಪಾದನೆಯನ್ನು ಬೆಂಬಲಿಸಿದ್ದ. ಅವನೊಂದಿಗೆ ಸಂಬಂಧ ಹೊಂದಿರುವ ಜನರನ್ನು ಯಾರಾದರೂ ಹೇಗೆ ಬೆಂಬಲಿಸಬಹುದು? ಮಲಿಕ್ ನಿಜವಾಗಿಯೂ ದೇಶವಿರೋಧಿ ಮತ್ತು ನಾನು ನನ್ನ ಹೇಳಿಕೆಗಳನ್ನು ಹಿಂತೆಗೆದುಕೊಳ್ಳುವುದಿಲ್ಲ” ಎಂದರು.