ಬಹುಶಃ ಇದೊಂದು ದಾಖಲೆಯೇ ಇರಬೇಕು. ಬರೋಬ್ಬರಿ 50 ವರ್ಷಗಳ ಕಾಲ ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸಲು ಸಾಧ್ಯವಾಗಿಲ್ಲ. ಅಂದರೆ ಬಾರತೀಯ ಜನ ಸಂಘದ (1951) ಅವಧಿಯಿಂದ ಇದುವರೆಗೆ ಕೋಟೆ ಮುರಿಯಲು ಅಸಾಧ್ಯವಾಗಿದೆ. 1952ರಲ್ಲಿ ಈ ಕ್ಷೇತ್ರ ರಚನೆಯಾದ ಸಂದರ್ಭದಲ್ಲಿ ಕಾಂಗ್ರೆಸ್‌ನ ಬಾದ್‌ಶಾ ಗುಪ್ತಾ ಜಯ ಸಾಧಿಸಿದ್ದರು. 1962, 1967, 1971, 1984ರಲ್ಲಿ ಅಲ್ಲಿ ಕಾಂಗ್ರೆಸ್ ಗೆದ್ದಿತ್ತು. 1957ರಲ್ಲಿ ಪ್ರಜಾ ಸೋಶಿಯಲಿಸ್ಟ್ ಪಕ್ಷ ಗೆದ್ದಿತ್ತು. 1977ರಲ್ಲಿ ಭಾರತೀಯ ಲೋಕ ದಳ, 1980ರಲ್ಲಿ ಜನತಾ ಪಾರ್ಟಿ ಸೆಕ್ಯುಲರ್, 1989 ಮತ್ತು 1991ರ ಚುನಾವಣೆಯಲ್ಲಿ ಜನತಾ ದಳ ಮತ್ತು ಜನತಾ ಪಾರ್ಟಿಯ ಅಭ್ಯರ್ಥಿ ಗೆದ್ದಿದ್ದರು. 1996ರಿಂದ 2004 ಮತ್ತು 2014ರಲ್ಲಿ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಗೆದ್ದಿದ್ದಾರೆ. ಆ ಚುನಾವಣೆಯಲ್ಲಿ ಆಜಂಗಢ, ಮೈನ್‌ಪುರಿಯಿಂದ ಸ್ಪರ್ಧಿಸಿ, ಗೆದ್ದಿದ್ದರು. ಅಂತಿಮವಾಗಿ ಮೈನ್‌ಪುರಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ನಡೆದು, ಸಂಬಂಧಿ ತೇಜ್ ಪ್ರತಾಪ್ ಸಿಂಗ್‌ರನ್ನು ಗೆಲ್ಲಿಸಿದ್ದರು.
1991ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ರಾಮ್ ನರೇಶ್ ಅಗ್ನಿಹೋತ್ರಿ 2ನೇ ಸ್ಥಾನಕ್ಕೆ ತಲುಪಿ ಪಕ್ಷಕ್ಕೆ ಕೊಂಚ ಸಮಾಧಾನ ತಂದುಕೊಟ್ಟಿದ್ದರು. ಈ ಬಾರಿ ಮುಲಾಯಂ ಸಿಂಗ್ ಯಾದವ್ ಮತ್ತು ಬಿಜೆಪಿಯ ಪ್ರೇಂ ಸಿಂಗ್ ಶಕ್ಯಾ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಈ ಕ್ಷೇತ್ರದಲ್ಲಿನ ಕುತೂಹಲಕಾರಿ ಸಂಗತಿಯೆಂದರೆ ಮುಲಾಯಂ ಸಿಂಗ್ ಯಾದವ್ ಮತ್ತು ಬಿಎಸ್‌ಪಿ ನಾಯಕಿ ಮಾಯಾವತಿ ಏ.19ರಂದು ಜಂಟಿಯಾಗಿ ಪ್ರಚಾರ ನಡೆಸಲಿದ್ದಾರೆ. ಅದುವೇ ಈ ಬಾರಿಯ ಪ್ರಧಾನ ಹೈಲೈಟ್ ಆಗಲಿದೆ. ಎಸ್‌ಪಿ-ಬಿಎಸ್‌ಪಿ ಮೈತ್ರಿಗೆ ಮೊದಲು ಅತೃಪ್ತಿ ಸೂಚಿಸಿ ನಂತರ ಸಮ್ಮತಿಸಿದ್ದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ದೇವ್‌ಬಂದ್, ಬದೌನ್‌ಗಳಲ್ಲಿ ಆಯೋಜಿಸಲಾಗಿದ್ದ ಎರಡೂ ಪಕ್ಷಗಳ ರ್ಯಾಲಿಗೆ ಗೈರುಹಾಜರಾಗಿದ್ದರು. ಪುತ್ರ ಅಖೀಲೇಶ್ ಯಾದವ್ ಒತ್ತಾಯಕ್ಕೆ ಜಂಟಿ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ ಎನ್ನುವುದು ಮಾಜಿ ಮುಖ್ಯಮಂತ್ರಿಯ ಅತ್ಯಂತ ಆಪ್ತರ ಹೇಳಿಕೆ.
ಎಸ್‌ಪಿ ಶಾಸಕ ರಾಜ್‌ಕುಮಾರ್ ಹೇಳುವ ಪ್ರಕಾರ ಮುಲಾಯಂ ಸಿಂಗ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಮತ್ತು ನೇತಾಜಿ ಹೆಚ್ಚಿನ ಬಹುಮತದಿಂದ ಗೆದ್ದು ಸಂಸತ್ ಪ್ರವೇಶಿಸುತ್ತಾರೆ.
ಬಿಎಸ್‌ಪಿ ನಾಯಕಿ ಮಾಯಾವತಿ ಕೂಡ ಎಸ್‌ಪಿ ಜತೆಗಿನ ಸ್ಥಳೀಯವಾಗಿ ಇರುವಂಥ ಭಿನ್ನಾಭಿಪ್ರಾಯ ಬದಿಗೆ ಇರಿಸಿ ಮುಲಾಯಂ ಸಿಂಗ್ ಜಯಕ್ಕೆ ಶ್ರಮಿಸಬೇಕು ಎಂದಿದ್ದಾರಂತೆ.
ಮಾ.8ರಂದು ಸಮಾಜವಾದಿ ಪಕ್ಷ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡುವ ಸಂದರ್ಭದಲ್ಲಿ ಪಕ್ಷದ ಸಂಸ್ಥಾಪಕ ಈ ಬಾರಿ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರ ಗೊತ್ತಾಯಿತು. ಕುತೂಹಲಕಾರಿಯಾದ ಅಂಶವೆಂದರೆ ಮಾಜಿ ಮುಖ್ಯಮಂತ್ರಿ ಮತ್ತು ಇತರರು ಈ ಬಗ್ಗೆ ಯಾರೂ ಮಾತನಾಡಿರಲೇ ಇಲ್ಲ.
ಹೋಳಿ ಹಬ್ಬದ ಬಳಿಕ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟ ಹಿರಿಯ ನಾಯಕನ ಗೆಲುವಿಗಾಗಿ 124 ರ್ಯಾಲಿಗಳನ್ನು ಆಯೋ ಜಿಸಿವೆ. 17.3 ಲಕ್ಷ ಮಂದಿ ಮತದಾರರ ಪೈಕಿ ಶೇ.35 ಮಂದಿ ಯಾದವ ಸಮುದಾಯಕ್ಕೆ ಸೇರಿದವರು. ಎರಡನೇ ಅತ್ಯಂತ ಹೆಚ್ಚಿನ ಸಮುದಾಯದವರು ಎಂದರೆ ಶೇ.29ರಷ್ಟು ಇರುವ ಠಾಕೂರರು. ಅವರ ಪೈಕಿಯಲ್ಲಿಯೇ ರಜಪೂತ್, ಚೌಹಾಣ್, ರಾಥೋಡ್, ಬಧೋರಿಯಾ ವಿಭಾಗಕ್ಕೆ ಸೇರಿದವರೂ ಇದ್ದಾರೆ. ಶಕ್ಯಾ, ಬ್ರಾಹ್ಮಣರು, ಎಸ್‌ಸಿ, ಮುಸ್ಲಿಮರು ನಂತರದ ಸಂಖ್ಯಾ ವರ್ಗದಲ್ಲಿ ಬರುತ್ತಾರೆ. ಎಸ್‌ಪಿ- ಬಿಎಸ್‌ಪಿ ಜತೆಗೆ ಸೇರಿರು ವುದರಿಂದ ಈ ಬಾರಿಯೂ ಮುಲಾಯಂ ಸಿಂಗ್ ಯಾದವ್ ಜಯ ಸಾಧಿಸುವುದು ಖಚಿತ ಎಂದು ಹೇಳಲಾಗುತ್ತಿದೆ.
2014ರ ಉಪ ಚುನಾವಣೆ
ತೇಜ್ ಪ್ರತಾಪ್ ಯಾದವ್ (ಎಸ್‌ಪಿ) 6,53,786
ಪ್ರೇಂ ಸಿಂಗ್ ಶಕ್ಯಾ (ಬಿಜೆಪಿ) 3,32, 537