ನಾನು ಬೆಳೆದದ್ದು ಹಾಸನದಲ್ಲಿ. ಅಲ್ಲಿ ನಮ್ಮ ಮನೆಯಿಂದ ಕೆಳಗೆ ಸ್ವಲ್ಪದೂರ ಹೋದರೆ ದೊಡ್ಡದೊದು ಕೆರೆಯಿತ್ತು. ಅದರ ಆಚೆಗೆ ಒಂದು ಸಣ್ಣ ಕೊಳವಿತ್ತು. ಬಸುರಿಯರು ಸಂಜೆ ವೇಳೆ ಅಲ್ಲಿಗೆ ಹೋಗುತ್ತಿರಲಿಲ್ಲ. ಆ ಜಾಗ ಅಷ್ಟು ಸರಿ ಇಲ್ಲವೆಂದು ಹೇಳುತ್ತಿದ್ದರು. ಅದರ ಹೆಸರು ಮಂಗಮಾರಿಕೊಳ. ಮುಂದೆ ನನಗೆ ತಿಳಿದದ್ದು ನನ್ನ ದೊಡ್ಡ ಸೋದರ ಅತ್ತೆ ಬಸುರಿ ಇ¨ªಾಗ ಅಲ್ಲಿ ಸೂರ್ಯಾಸ್ತ ಆದ ಮೇಲೆ ಹೋಗಿದ್ದಳು ಅಂತ. ಮುಂದೆ ಅವಳಿಗೆ ಬಾಣಂತಿ ಸನ್ನಿ ಆಯಿತು, ಇದರಿಂದಾಗಿ ಅವಳು ತಲೆಕೆಟ್ಟವಳಂತೆ ಅಳುವುದು, ನಗುವುದು, ಮೌನವಾಗಿರುವುದು, ಸಾಯಲು ಪ್ರಯತ್ನಿಸುವುದು ಮಾಡುತ್ತಿದ್ದಳು. ಕೆಲವು ವೇಳೆ ಮನಸ್ಸು ಸರಿ ಇದ್ದಾಗ ತ್ರಿವೇಣಿ, ಎಂ. ಕೆ. ಇಂದಿರಾ ಮುಂತಾದವರ ಕಾದಂಬರಿ ಓದುತ್ತಿದ್ದಳು. ನನ್ನ ತಾತನನ್ನು ಬಿಟ್ಟರೆ ನಮ್ಮ ಮನೆಯ ಉಳಿದ ಹೆಣ್ಣು ಮಕ್ಕಳ ಪೈಕಿ ಒಳ್ಳೆಯ ಇಂಗ್ಲಿಶ್ ಮಾತನಾಡಲು ಬರುತ್ತಿದ್ದುದು ಅವಳೊಬ್ಬಳಿಗೆ. ಅವಳಿಗೆ ನನ್ನ ತಾತ ವಿಷ್ಣುಸಹಸ್ರನಾಮದ ಶ್ಲೋಕಗಳನ್ನು ಹೇಳಿಕೊಡುತ್ತಿದ್ದರು. ಅದು ಏಕೆ ಎಂದು ನನಗೆ ನಂತರ ತಿಳಿಯಿತು. ಏನೇ ಆಗಲಿ ಒಂದು ದಿನ ಅವಳು ಆಂತರಿಕ ತುಮುಲ, ಭೀತಿ ತಡೆಯಲಾರದೆ ಅಣತಿ ಎಂಬ ಊರಿನಲ್ಲಿ ಬಾವಿಗೆ ಬಿದ್ದು ಅಸು ನೀಗಿಕೊಂಡಳು. ಸಾವು, ಭಯ ಅದನ್ನು ಮೀರುವಿಕೆಯ ಶಾಸ್ತ್ರವಾಗಿ ತಂತ್ರಗಳು ನನ್ನೊಳಗೆ ಇಳಿಯಲು ಇದೂ ಒಂದು ಕಾರಣ ಎಂದು ಈಗ ಅನಿಸುತ್ತದೆ.
Advertisement
ಮಂತ್ರಗಳ ಪ್ರಪಂಚ ಒಂದು ರೀತಿ ಅರ್ಥರಹಿತ ಪ್ರಪಂಚ. ಈ ಅರ್ಥರಹಿತ ಪ್ರಪಂಚವನ್ನು ಅರ್ಥಪೂರ್ಣ ಮಾಡುವುದು ಮಂತ್ರಗಳು. ಅದರ ಶಕ್ತಿಯಿರುವುದು ಸರಿಯಾದ ಪಠಣದಲ್ಲಿ, ಉಚ್ಚಾರದಲ್ಲಿ. ಎಲ್ಲಕ್ಕಿಂತ ಮಿಗಿಲಾಗಿ ನಂಬಿಕೆ-ಪ್ರಯೋಗಪರಿಣತ ಮತಿಗಳು ಬೆರೆತ ಸ್ಥಿತಿಯಲ್ಲಿ. ನನ್ನ ತಾತ ಪ್ರತಿನಿತ್ಯ ವಿಷ್ಣು ಸಹಸ್ರನಾಮ ಹೇಳಿಕೊಳ್ಳುತ್ತಿದ್ದರು. ಒಂದು ದಿನ ಇದ್ದಕ್ಕಿದ್ದಂತೆ ಜಿ. ಪಿ. ರಾಜರತ್ನಂ ಅರ್ಥಬರೆದಿರುವ ಆದಿತ್ಯಹೃದಯದ ಪುಸ್ತಕವನ್ನು ತಂದವರೇ ನನಗೆ ಅದನ್ನು ಕ್ರಮವಾಗಿ ಹೇಳಿಕೊಡತೊಡಗಿದರು. ಅದರ ಮಾಂತ್ರಿಕತೆ ಇಂದಿಗೂ ನನ್ನಲ್ಲಿ ಅಳಿದಿಲ್ಲ. ಭಯ ಕತ್ತಲೆಯಾದರೆ ಮಂತ್ರ ಬೆಳಕು. ಈಗ ಅತ್ತೆಯೂ ಇಲ್ಲ, ತಾತನೂ ಹೋಗಿ ವರ್ಷಗಳಾದವು. ನಗರಾಭಿವೃದ್ಧಿ ಯೋಜನೆಯಲ್ಲಿ ದೊಡ್ಡಕೆರೆ ಮತ್ತು ಮಂಗಮಾರಿಕೊಳ ಎಲ್ಲ ಕಣ್ಮರೆಯಾಗಿವೆ. ಆದರೆ ಆದಿತ್ಯಹೃದಯ, ವಿಷ್ಣುಸಹಸ್ರನಾಮಗಳು ಹಾಗೇ ಉಳಿದಿವೆ-ಸೂರ್ಯನಂತೆ.
Related Articles
Advertisement
ಕಾಳಿದಾಸನಲ್ಲಿ ಮಾತು-ಅರ್ಥದ ದಾಂಪತ್ಯದ ಚಿಂತನೆ ಇದ್ದರೆ, ಬೇಂದ್ರೆಯಲ್ಲಿ ಮಾತು-ಮೌನಗಳ ಸಂಬಂಧದ ಸಾಲುಗಳಿವೆ. ತಂತ್ರಗಳಿಗೂ ಸಾಹಿತ್ಯ ಕುರಿತು ಮೀಮಾಂಸೆ ಮಾಡುವ ಕಾವ್ಯ ಮೀಮಾಂಸೆಗೂ ಆಳದಲ್ಲಿ ಪೂರ್ವಮೀಮಾಂಸೆಯೊಡನೆ ದಾರ್ಶನಿಕ ಸಂಬಂಧವಿದೆ. ಕಾವ್ಯಮೀಮಾಂಸೆ ಕಾವ್ಯದ ರಚನೆಯ ಆಚರಣೆಯ, ಪ್ರಕ್ರಿಯೆ ಕುರಿತು ವಿಸ್ತಾರವಾಗಿ ಮಾತನಾಡಿದೆ. ಪೂರ್ವಮೀಮಾಂಸೆ ಮಂತ್ರ, ಯಜ್ಞದ ವಿಧಿವಿಧಾನಗಳನ್ನು ಕುರಿತು ವಿಪುಲವಾಗಿ ಚಿಂತನೆ ಮಾಡಿದೆ. ಮಾತನ್ನು ಈ ದರ್ಶನ ಪರಾ, ಪಶ್ಯಂತಿ, ಮಧ್ಯಮಾ, ವೈಖರೀ ಎಂದು ನಾಲ್ಕು ಹಂತಗಳಲ್ಲಿ ಕಂಡಿದೆ. ಇಲ್ಲಿ ಮಾತು ಮಂತ್ರ, ಅರ್ಥ, ಮೌನ ಎಲ್ಲವೂ ಪರಸ್ಪರ ಸಂಬಂಧ ಹೊಂದಿವೆ. ಮಾತನ್ನು ವೈದಿಕರು, ವೇದಾಂತಿಗಳೂ, ತಾಂತ್ರಿಕರೂ ಬಹಳ ಗೌರವದಿಂದ ತಾಯಿ ಎಂದಿದ್ದಾರೆ.
ತಂತ್ರಗಳ ಲೋಕ ಬಹಳ ವಿಸ್ಮಯ ಹುಟ್ಟಿಸುವಂಥದ್ದು. ಬ್ರಿಟಿಶರ ಕಾಲದಲ್ಲಿ ನಾವು ಈಗ ಉಸಿರಾಡುತ್ತಿರುವ ಅನೇಕ ತಣ್ತೀ ರೂಪಿಕೆಗಳು ಮೈದಾಳಿದವು. ಅದರಲ್ಲಿ ಕ್ರೈಸ್ತ ಜಗತ್‌ದೃಷ್ಟಿಯ ಹಲವು ಅಂಶಗಳು ನಮ್ಮ ಈಗಿನ ಲೋಕಗ್ರಹಿಕೆಯೊಳಗೆ ಕರಗಿಹೋಗಿವೆ. ಅದರಲ್ಲಿ ವರ್ಜಿನಿಟಿ ಮತ್ತು ನೀತಿಗೆ ಸಂಬಂಧಿಸಿದ ಪರಿಕಲ್ಪನೆಗಳೂ ಸೇರಿವೆ. ಹೆಣ್ಣು-ಗಂಡಿನ ಸಂಬಂಧವನ್ನು ನೀತಿ ಮತ್ತು ಧರ್ಮ ಇವುಗಳ ದೃಷ್ಟಿಯಿಂದ ನೋಡುವುದರಲ್ಲಿ ಬಹಳ ವ್ಯತ್ಯಾಸಗಳಿವೆ. ತಂತ್ರವು ಮನುಷ್ಯನ ವಿವಿಧ ಬಗೆಯ ಸ್ವಾತಂತ್ರ್ಯಗಳನ್ನು ಪರಿಪರಿಯಾಗಿ ವಿವರಿಸಿ ಹೇಳಿದೆ. ಅದನ್ನು ಜೀವನದಲ್ಲಿ ಕಂಡುಕೊಳ್ಳುವ ಮಾರ್ಗಗಳನ್ನು ಹೇಳಿಕೊಟ್ಟಿದೆ.
ಉಪನಿಷತ್ತುಗಳು ಮತ್ತು ತಂತ್ರಗಳು ಅಧ್ಯಾತ್ಮ ಸಾಧನೆಯನ್ನೇ ಹೇಳಿವೆ. ಇವೆರಡರಲ್ಲೂ ಗುರುವಿಗೆ ಬಹಳ ಮಹತ್ವ. ಗುರು ಮತ್ತು ಶಿಷ್ಯರ ಸಂಬಂಧ ಬಹಳ ಪವಿತ್ರ ಮತ್ತು ರಹಸ್ಯವಾದದ್ದು. ಮಂತ್ರ ಸಾಧನೆಗೆ ಎರಡರಲ್ಲೂ ಉತ್ತಮ ಸ್ಥಾನವಿದೆ. ಆದರೂ ಇವೆರಡರ ಚಿಂತನೆ ಮತ್ತು ಸಾಧನೆಯಲ್ಲಿ ಕೆಲವು ಮುಖ್ಯ ಅಂತರಗಳೂ ಇವೆ. ವೇದಾಂತವು ಶಕ್ತಿ ತಣ್ತೀಕ್ಕೆ ಪ್ರಾಮುಖ್ಯ ನೀಡಿದರೂ ಅದು ಪರಬ್ರಹ್ಮನ ನಂತರದ ಸ್ಥಾನ ಹೊಂದಿರುತ್ತದೆ.
ಏನೇ ಆಗಲಿ, ಭಾರತದ ಎಲ್ಲಾ ಆಧ್ಯಾತ್ಮಿಕ ಪರಂಪರೆಗಳು ವಾದ-ವಿವಾದದ ಮನೆಯ ಹಜಾರ ದಾಟಿ ಕೊನೆಗೆ ಮಂತ್ರೋಪಾಸನೆಯ ಗರ್ಭಗುಡಿಯಲ್ಲಿ ಒಂದಾಗುತ್ತವೆ ಎಂಬುದು ಅನುಭವ ಸಿದ್ಧ ವಿಚಾರ. ಆಧುನಿಕ ಧಾರ್ಮಿಕ ಅಧ್ಯಯನಗಳಿಗೆ ಅರ್ಥವಾಗದ ಎರಡು ಸಂಗತಿಗಳೆಂದರೆ ವಿಚಾರಕ್ಕೆ ಸಿಗದ ಗುರು ಶಿಷ್ಯ ಪರಂಪರೆ ಮತ್ತು ಮಂತ್ರಗಳ ಜಗತ್ತು. ಅಸಲಿ ವೈದಿಕ ಮತ್ತು ತಾಂತ್ರಿಕ ಲೋಕಕ್ಕೆ ಇವುಗಳೇ ಮುಖ್ಯದ್ವಾರಗಳು ಎಂದರೆ ತಪ್ಪಾಗುವುದಿಲ್ಲ. ಆದಿತ್ಯಹೃದಯ ಮತ್ತು ವಿಷ್ಣುಸಹಸ್ರನಾಮದಂಥ ಶ್ಲೋಕರಾಶಿಗೆ ಎರಡು ಆಯಾಮಗಳಿವೆ. ಒಂದು ನಿತ್ಯವೂ ಮುಂಜಾನೆ ಹಾಗೆ ಹೇಳಿಕೊಳ್ಳುವ ಪಾರಾಯಣದ ದಾರಿ. ಇನ್ನೊಂದು ನಿರ್ದಿಷ್ಟವಾದ ಕಾರಣಕ್ಕೆ ಅಥವಾ ತಿಳಿಯದ ಕಾರಣಕ್ಕೆ ಭಯ, ಆತಂಕ, ಭೀಕರ ಸ್ವಪ್ನದರ್ಶನ, ಮಾಟ ಇದರಿಂದ ಪಾರಾಗಲು ಇದನ್ನು ದಿನವೂ ಹೇಳಿಕೊಳ್ಳುವ ಭಯದಿಂದ ಹೊರಗೆ ಬರುವ ದಾರಿ. ಯಾವುದು ನಮ್ಮನ್ನು ಭಯದಿಂದ ಹೊರಗೆ ತರುವುದೋ ಅದು ಮಂತ್ರವೆನಿಸಿಕೊಳ್ಳುತ್ತದೆ. ಅದರ ಅರ್ಥವೇನು, ಅದು ಎಷ್ಟು ಪ್ರಾಚೀನ ಎಂಬುದು ಮಾಮೂಲಿ ಇತಿಹಾಸದ ಇಂಚುಪೆಟ್ಟಿಗೆ ಸಿಗುವುದಿಲ್ಲ. ಸಮಸ್ಯೆ ಇದೆ ಎಂಬುದು ಎಷ್ಟು ಖಚಿತವೋ ಪರಿಹಾರವೂ ಇದೆ ಎಂಬುದು ಅಷ್ಟೇ ಸಹಜವಾದ ಖಚಿತ ಅಂಶ. ಮಗುವಿಗೆ ಹಾಲು ಬೇಕಿದೆ, ತಾಯಿಯ ಮೊಲೆಯಲ್ಲಿ ಹಾಲು ಸಿದ್ಧವಿದೆ ಎಂಬ ಉದಾಹರಣೆಯಂತೆ ಇದು. ಹಾಲಿನ ಮೀಮಾಂಸೆ, ಜಿಜ್ಞಾಸೆ ಮಾಡಿದರೆ ಹಾಲು ಕುಡಿದಂತೆ ಆಗದು. ಅಂದರೆ ಮಂತ್ರ ಪ್ರಪಂಚವಿರುವುದು ಕೇವಲ ಹರಟೆ, ಚರ್ಚೆಗೆ ಅಲ್ಲವೇ ಅಲ್ಲ. ಅದು ಮಾಡಿನೋಡುವ ಮಾರ್ಗ. ಈ ಮಹಾಮಾರ್ಗದಲ್ಲಿ ಈವರೆಗೂ ಕೋಟ್ಯಂತರ ಸಾಧಕರು ಆಗಿಹೋಗಿ¨ªಾರೆ. ಅದರ ನೆನಪಿಗೆ ಮಾಂತ್ರಿಕಸ್ಪರ್ಶ ಎಂದು ಹೆಸರು.
ಜಿ. ಬಿ. ಹರೀಶ