ಪ್ರಧಾನಿ ನರೇಂದ್ರ ಮೋದಿ ಭಾರತದ ಜನಮೆಚ್ಚಿದ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಆ ವೈಯಕ್ತಿಕ ವರ್ಚಸ್ಸು ಹಾಗೂ ಜನಪ್ರಿಯತೆಯನ್ನು ರಾಜಕೀಯ ಜಯಭೇರಿಯಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದು ಕಾರ್ಯತಂತ್ರ ನಿಪುಣ ಅಮಿತ್ ಶಾ. ಬಿಜೆಪಿಯ ಅಮೋಘ ಗೆಲುವಿನ ಹಿಂದೆ ಅಮಿತ್ ಶಾ ರೂಪಿಸಿದ ತಂತ್ರಗಾರಿಕೆಯೂ ಪ್ರಮುಖ ಪಾತ್ರ ವಹಿಸಿದೆ ಎನ್ನುವುದು ಸತ್ಯ.
2014ರ ಚುನಾವಣೆಯಲ್ಲಿ ಯಶಸ್ಸು ಗಳಿಸಿದಾಗ ಮೋದಿಯವರಿಂದಲೇ “ಮ್ಯಾನ್ ಆಫ್ ದಿ ಮ್ಯಾಚ್’ ಎಂದು ಹೊಗಳಿಸಿಕೊಂಡಿದ್ದ ಶಾ ಅವರು ಸಂಭ್ರಮಾಚರಣೆಯ ಮನಸ್ಥಿತಿಯಲ್ಲಿರಲಿಲ್ಲ. ಅವರ ದೃಷ್ಟಿ ಆಗಲೇ 2019ರ ಚುನಾವಣೆಯ ಮೇಲೆ ಹರಿದಾಗಿತ್ತು¤. ಉತ್ತರ, ಪಶ್ಚಿಮ ಮತ್ತು ಮಧ್ಯಭಾಗದ ರಾಜ್ಯಗಳಲ್ಲಿ ಬಿಜೆಪಿ ಸಾಕಷ್ಟು ಸೀಟುಗಳನ್ನು ಪಡೆದುಕೊಳ್ಳಲು ಕಷ್ಟವಾಗಬಹುದು ಎನ್ನುವುದನ್ನು ಮೊದಲೇ ಊಹಿಸಿದ್ದ ಅಮಿತ್ ಶಾ, ಈ ಕೊರತೆಯನ್ನು ಮಿಕ್ಕ ರಾಜ್ಯಗಳಲ್ಲಿ ಸರಿದೂಗಿಸಲು ಮುಂದಾಗಿದ್ದು ಅವರ ದೂರಾಲೋಚನೆಗೆ ಹಿಡಿದ ಕೈಗನ್ನಡಿ.
ಕಳೆದ ಚುನಾವಣೆಯಲ್ಲಿ ಮೋದಿ ಅಲೆಯ ಹೊರತಾಗಿಯೂ ಬಿಜೆಪಿ ಕಳೆದುಕೊಂಡಿದ್ದ 120 ಸೀಟುಗಳನ್ನು ವಶಪಡಿಸಿಕೊಳ್ಳಬೇಕೆನ್ನುವುದು ಶಾ ಅವರ ಒತ್ತಾಸೆಯಾಗಿತ್ತು. ಕಡೆಗೆ ಬಿಜೆಪಿ 120ರಲ್ಲಿ 80 ಕ್ಷೇತ್ರಗಳತ್ತ ಗಮನ ಕೇಂದ್ರೀಕರಿಸಿತ್ತು. ಅದರಲ್ಲಿ ಅರ್ಧದಷ್ಟು ಕ್ಷೇತ್ರಗಳನ್ನು ಈ ಬಾರಿ ಬಿಜೆಪಿ ಗೆದ್ದುಕೊಂಡಿದೆ. ಪಶ್ಚಿಮ ಬಂಗಾಲ, ಒಡಿಶಾ, ಕೇರಳ, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಮತದಾರರನ್ನು ಸೆಳೆಯಲು ನಡೆಸಿದ ಪ್ರಯತ್ನ ಒಂದೆರಡಲ್ಲ.
ಮಮತಾ ಬ್ಯಾನರ್ಜಿಯ ಭದ್ರಕೋಟೆ ಪಶ್ಚಿಮ ಬಂಗಾಳಕ್ಕೆ ಶಾ 88 ಬಾರಿ ಭೇಟಿ ನೀಡಿದ್ದು ಅದಕ್ಕೊಂದು ಉದಾಹರಣೆ. ಹಾಗೆಂದು ಬಿಜೆಪಿ ಪ್ರಾಬಲ್ಯವಿರುವ ರಾಜ್ಯಗಳನ್ನು ಎಂದಿಗೂ ಅವರು ಕಡೆಗಣಿಸಲಿಲ್ಲ. ಇತರೆ ಪಕ್ಷಗಳ ಜೊತೆ ಕೈಜೋಡಿಸುವ ಸಂದರ್ಭ ಬಂದಾಗಲೆಲ್ಲಾ ಚಾಣಾಕ್ಷತನ ಮೆರೆದಿದ್ದಾರೆ.
ಶಿವಸೇನೆ ಅಥವಾ ನಿತೀಶ್ ಕುಮಾರ್ ಜತೆಗಿದ್ದ ವೈಮನಸ್ಯ ದೂರ ಮಾಡಿಕೊಂಡಿದ್ದಿರಬಹುದು. ಅವೆಲ್ಲವುಗಳ ಪರಿಣಾಮ ಈ ಬಾರಿಯ ಫಲಿತಾಂಶದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಅಮಿತ್ ಶಾ ಅವರು ಚುನಾವಣೆಯ ಸಮಯದಲ್ಲಿ ಒಟ್ಟು 1.50 ಲಕ್ಷ ಕಿ.ಮೀ. ಸಂಚರಿಸಿದ್ದು, 161 ಸಾರ್ವಜನಿಕ ರ್ಯಾಲಿಗಳನ್ನು ನಡೆಸಿದ್ದಾರಂತೆ.