ಲಕ್ನೋ: ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಬನದ ಹುಣ್ಣಿಮೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ವಾರ್ಷಿಕ ಮಾಘ ಮೇಳ ಶುಕ್ರವಾರದಿಂದ ಆರಂಭಗೊಂಡಿದ್ದು, ಮಾಘ ಮೇಳದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಹಿಂದೂಗಳು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ.
ಈ ವರ್ಷವೂ ಸುಮಾರು 40 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ. ಅಲ್ಲದೇ ಶುಕ್ರವಾರ ತೋಳ ಚಂದ್ರಗ್ರಹಣ ಸಂಭವಿಸಲಿರುವ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ವರದಿ ವಿವರಿಸಿದೆ.
ಪ್ರತಿ 12 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ ನಡೆಯುತ್ತದೆ. ಇದಕ್ಕೆ ಹೊರತಾಗಿ ಪ್ರತಿ ಆರು ವರ್ಷಗಳಿಗೊಮ್ಮೆ ಅರ್ಧ ಕುಂಭಮೇಳ ನಡೆಯುತ್ತದೆ. ವರ್ಷಕ್ಕೊಮ್ಮೆ ಪ್ರತಿ ಜನವರಿ ಬನದ ಹುಣ್ಣಿಮೆ ದಿನದಂದು ಮಾಘ ಮೇಳ ತ್ರಿವೇಣಿ ಸಂಗಮದಲ್ಲಿ ನಡೆಯುತ್ತದೆ. ಮೈಕೊರೆಯುವ ಚಳಿಯಲ್ಲಿ ಪವಿತ್ರ ನದಿಗಳ ಸಂಗಮದಲ್ಲಿ ಭಕ್ತರು ಮುಳುಗೆದ್ದು ಪೂಜೆ ಸಲ್ಲಿಸುತ್ತಾರೆ.
ಮುಂಜಾಗ್ರತಾ ಕ್ರಮವಾಗಿ 3,500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತೀಯಾದ ಚಳಿಗಾಳಿ ಬೀಸುತ್ತಿದ್ದು, ತ್ರಿವೇಣಿ ಸಂಗಮ ಪ್ರದೇಶದಲ್ಲಿ ಆ್ಯಂಬುಲೆನ್ಸ್ ಗಳನ್ನು ಇರಿಸಲಾಗಿದೆ.
ಮಾಘ ಮೇಳ ಟೌನ್ ಶಿಪ್ ನಲ್ಲಿ ತಾತ್ಕಾಲಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರಿಗೆ, ಶೌಚಾಲಯ, ಘಾಟ್ಸ್, ಭದ್ರತೆ, ಅಗ್ನಿಶಾಮಕ ದಳ ಸೇವೆ, ಪಡಿತರ ವಿತರಣೆ, ಶುದ್ಧ ನೀರು, ವಾಯುಮಾಲಿನ್ಯ ತಡೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಉತ್ತರಪ್ರದೇಶ ಸರ್ಕಾರ ತಿಳಿಸಿದೆ.