Advertisement

ರಂಗೇರಿದ ಮಾಗಡಿ ಪುರಸಭಾ ಚುನಾವಣಾ ಕಣ

04:25 PM Nov 07, 2019 | Naveen |

●ವಿಶೇಷ ವರದಿ ; ತಿರುಮಲೆ ಶ್ರೀನಿವಾಸ್‌
ಮಾಗಡಿ:
ಪುರಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಪುರಸಭೆಯ ಅಧಿಕಾರ ಹಿಡಿಯುವುದು ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಪ್ರತಿಷ್ಠೆಯಾಗಿದ್ದು, ಉಭಯ ಪಕ್ಷಗಳ ನಾಯಕರು ಜಿದ್ದಾಜಿದ್ದಿಗೆ ಇಳಿದಿದ್ದಾರೆ.

Advertisement

ಮಾಗಡಿ ಪಟ್ಟಣದ ಸ್ಥಳೀಯ ಪುರಸಭೆ ಚುನಾವಣೆಯ ಒಟ್ಟು 23 ವಾರ್ಡ್‌ಗಳಿಗೆ ನ.12 ರಂದು ಮತದಾನ ನಡೆಯಲಿದ್ದು, ಕಳೆದ 2 ದಿನಗಳಿಂದಲೂ ಹಾಲಿ ಮತ್ತು ಮಾಜಿ ಶಾಸಕರು ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಅಭ್ಯರ್ಥಿಗಳ ಪರವಾಗಿ ಮನೆ ಮನೆಗೆ ತೆರಳಿ ಮತ ಯಾಚನೆ ನಡೆಸುತ್ತಿದ್ದಾರೆ.

ನಾಯಕರ ಆಗಮನ: ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಪರವಾಗಿ ರಾಜ್ಯ ನಾಯಕರು ಮತ ಪ್ರಚಾರಕ್ಕೆ ಮಾಗಡಿಗೆ ಆಗಮಿಸುತ್ತಿದ್ದಾರೆ. ಇಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ನ.9ಕ್ಕೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮತ್ತು ಇತರೆ ನಾಯಕರು ಮಾಗಡಿ ಪಟ್ಟಣದಲ್ಲಿ ಜೆಡಿಎಸ್‌ ಅಭ್ಯರ್ಥಿ ಗಳ ಪರವಾಗಿ ರೋಡ್‌ಶೋ ಮೂಲಕ ಅಬ್ಬರದ ಪ್ರಚಾರ ಕೈಗೊಳ್ಳಲಿದ್ದಾರೆ.ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಗಳ ಪರವಾಗಿ ಎಂಎಲ್‌ಸಿಗಳಾದ ಎಚ್‌.ಎಂ.ರೇವಣ್ಣ, ಸಿ.ಎಂ.ಲಿಂಗಪ್ಪ, ಎಸ್‌.ರವಿ ಇತರೆ ರಾಜ್ಯ ನಾಯಕರು, ಮಾಜಿ ಶಾಸಕ ಎಚ್‌. ಸಿ.ಬಾಲಕೃಷ್ಣ ಅವರು ಪ್ರಚಾರಕ್ಕೆ ಆಗಮಿಸಲಿದ್ದಾರೆ.

23 ವಾರ್ಡ್‌ಗಳಲ್ಲಿಯೂ ಬಿಜೆಪಿ ಕಣಕ್ಕೆ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ದಲ್ಲಿರುವುದರಿಂದ 23 ವಾರ್ಡ್‌ಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿದಿರುವುದು ವಿಶೇಷ. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಎಂಎಲ್‌ಸಿ ಆ.ದೇವೇಗೌಡ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌, ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್‌.ಬಸವ ರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್‌.ರುದ್ರೇಶ್‌, ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಜಿ.ರಂಗಧಾಮಯ್ಯ ಅವರು ರೋಡ್‌ ಶೋ ನಡೆಸಲು ಯೋಜನೆ ರೂಪಿಸಿದ್ದಾರೆ. ಎಸ್‌ಡಿಪಿಐ ಮತ್ತು ಪಕ್ಷೇತರ ಅಭ್ಯರ್ಥಿಗಳು ಸಹ ಕಣದಲ್ಲಿದ್ದು, ಅಲ್ಲಲ್ಲಿ ಮತಯಾಚನೆಯಲ್ಲಿ ತೊಡಗಿದ್ದಾರೆ.

ಇಲ್ಲಿಯವರೆಗೂ ನಡೆದಿರುವ ಸ್ಥಳೀಯ ಪುರಸಭೆ ವ್ಯಾಪ್ತಿಯ ಅಭಿವೃದ್ಧಿಯ ಕಾರ್ಯ ಕ್ರಮಗಳ ಕುರಿತು ಹಾಲಿ ಮತ್ತು ಮಾಜಿ ಶಾಸಕರು ಆರೋಪ ಪ್ರತ್ಯಾರೋಪ ನಡೆಸುತ್ತಿದ್ದಾರೆ. ಏನೇ ಆದರೂ ಈ ಬಾರಿ ಸ್ಥಳೀಯ ಪುರಸಭೆ ಚುನಾವಣೆಯ ಕಾವು ಅಂತಂತ್ರ ವಾದರೂ ಅಚ್ಚರಿಪಡಬೇಕಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next