Advertisement

ಬಿಡಾಡಿ ದನಗಳ ಹಾವಳಿಗೆ ಬ್ರೇಕ್‌ ಹಾಕಿ

06:00 PM Oct 17, 2019 | Naveen |

ತಿರುಮಲೆ ಶ್ರೀನಿವಾಸ್‌
ಮಾಗಡಿ:
ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಿದ್ದು, ಇದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಸಂಚರಿಸಲು ತೀವ್ರ ತೊಂದರೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

ಪಟ್ಟಣದ ಮುಖ್ಯರಸ್ತೆ ಹಾಗೂ ಅಲ್ಲಲ್ಲಿ ವೃತ್ತಗಳ ಬಳಿ ರಾಶಿ ರಾಶಿ ಕಸಗಳ ಮಧ್ಯೆ ಆಹಾರ ಹರಸಿ ಬರುವ ಬಿಡಾಡಿ ದನಗಳು ರಸ್ತೆ ಮಧ್ಯೆಯೇ ಅಡ್ಡಾದಿಡ್ಡಿಯಾಗಿ ಓಡಾಡುತ್ತಿರುತ್ತವೆ. ಇದರಿಂದ ವಾಹನ ಸವಾರರಿಗೆ ಅಡೆತಡೆಯಾಗುತ್ತಿದೆ. ವಾಹನ ಸವಾರರು ದನಗಳ ಮಧ್ಯೆ ಸಂಚರಿಸಲು ಹೋಗಿ ದನಗಳಿಗೆ ತಾಕಿ ಪಘಾತ ಸಂಭವಿಸಿರುವ ಅನೇಕ ಘಟನೆಗಳು ನಡೆದಿವೆ.

ಅನೇಕ ಅಪಘಾತ ಸಂಭವಿಸಿವೆ: ಅದರಲ್ಲೂ ವಯೋ ವೃದ್ಧರು, ಯವತಿಯರು, ಮಕ್ಕಳನ್ನು ಕಂಡೊಡನೆ ಬಿಡಾಡಿ ದನಗಳು ಮೇಲೆ ಎರಗಲು ಯತ್ನಿಸುತ್ತವೆ.

ದನಗಳಿಂದ ತಪ್ಪಿಸಿಕೊಳ್ಳಲು ಭಯದಿಂದಲೇ ಕಾಲಿಗೆ ಬುದ್ಧಿ ಹೇಳುತ್ತಾರೆ. ಕೆಲವರು ವಾಹನಗಳಿಗೆ ಅಡ್ಡ ಬರುವ ದನಗಳನ್ನು ರಕ್ಷಿಸಲು ಹೋಗಿ ಎದುರಿಗೆ ಬರುವ ವಾಹನಕ್ಕೆ ಡಿಕ್ಕಿ ಹೊಡೆದು ಆಸ್ಪತ್ರೆ ಸೇರಿದ್ದಾರೆ.

ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ: ದೊಡ್ಡ ವಾಹನಗಳು ಬಿಡಾಡಿ ದನಗಳಿಗೆ ತಾಕಿದ್ದರಿಂದ ದನಗಳು ಸಹ ಗಾಯಗೊಳ್ಳುತ್ತಿವೆ. ಎಷ್ಟೋ ದನಗಳು ಮೃತಪಟ್ಟಿರುವ ಉದಾಹರಣೆಗಳಿವೆ. ಹೀಗಿರುವಾಗ ಪುರಸಭೆ ಅಧಿಕಾರಿಗಳಾಗಲಿ ಅಥವಾ ಗೋ ಸಂರಕ್ಷಣೆ ಪದಾಧಿಕಾರಿಗಳಾಗಲಿ ಗೋವುಗಳನ್ನು ಬೇರೆಡೆ ಬಿಡದೆ ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಸಾರ್ವಜನಿಕರಲ್ಲಿ ಬೇಸರ ತಂದಿದೆ.

Advertisement

ಅಳಲು ತೋಡಿಕೊಂಡ ನಾಗರಿಕರು: ಈ ಬಗ್ಗೆ ಉದಯವಾಣಿಯೊಂದಿಗೆ ಸ್ಥಳೀಯರಾದ ನರಸಿಂಹಯ್ಯ ಮಾತನಾಡಿ, ಪಟ್ಟಣದ ಹೃದಯ ಭಾಗವೇ ಆಗಿರುವ ಕೆಂಪೇಗೌಡ ವೃತ್ತದ ಬಳಿಯೇ ಕಸದ ರಾಶಿ ಬಿದ್ದಿರುತ್ತದೆ. ಅದೇ ರೀತಿ ಬಿಕೆ ರಸ್ತೆ, ಕಲ್ಯಾಗೇಟ್‌, ತಿರುಮಲೆ ಮುಖ್ಯರಸ್ತೆ ಹೀಗೆ ಕಸದ ರಾಶಿ ಮುಂದೆ ಬಿಡಾಡಿ ದನಗಳ ಹಿಂಡು ಹಿಂಡಾಗಿ ನಿಂತು ಕಸದ ರಾಶಿಯಲ್ಲಿ ಆಹಾರ ಹುಡುಕಿ ತಿಂದು ರಸ್ತೆ ಮಧ್ಯೆಯೇ ಮಲಗಿರುತ್ತವೆ. ಕೆಲವು ಅಡ್ಡಾಡುತ್ತಿರುತ್ತವೆ.

ಪುರಸಭೆ ಅಧಿಕಾರಿಗಳು ಬಿಡಾಡಿ ದನಗಳ ವಾರಸುದಾರರನ್ನು ಪತ್ತೆ ಮಾಡಿ ಅವರಿಗೆ ರಸ್ತೆ ಬಿಡದಂತೆ ತಿಳಿವಳಿಕೆ ನೀಡಬೇಕು. ಇಲ್ಲದಿದ್ದರೆ ಕನಿಷ್ಠ ಪಕ್ಷ ಗೋಶಾಲೆಗೆ ಬಿಡುವ ಪ್ರಾಮಾಣಿಕ ಪ್ರಯತ್ನ ವಾದರೂ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next