ಮಾಗಡಿ: ತಾಲೂಕಿನ ನೇತೇನಹಳ್ಳಿ ಸುಪ್ರಸಿದ್ಧ ಸಿದ್ಧಿ ಶ್ರೀವಿನಾಯಕ ಸ್ವಾಮಿಯ 8ನೇ ವರ್ಷದ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ನೆರವೇರಿತು.
ಬ್ರಹ್ಮರಥೋತ್ಸವಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಆಸ್ಥಾನ ವಿದ್ವಾನ್ ಎನ್.ವೇಣುಗೋಪಾಲ ಶಾಸ್ತ್ರಿ ಚಾಲನೆ ನೀಡಿದರು. ನೇತೇನಹಳ್ಳಿ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಬ್ರಹ್ಮರಥೋತ್ಸವದ ಪ್ರಯುಕ್ತ ವಿನಾಯಕ ಸ್ವಾಮಿಗೆ ಕಲಶ ಸ್ಥಾಪನೆ, ಹವನ, ಹೋಮ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಈ ವೇಳೆ ರಾಷ್ಟ್ರಪ್ರಶಸ್ತಿ ವಿಜೇತ ಆಸ್ಥಾನ ವಿದ್ವಾನ್ ಎನ್. ವೇಣುಗೋಪಾಲಶಾಸ್ತ್ರಿ ಮಾತನಾಡಿ, ನೇತೇನಹಳ್ಳಿ ವಿನಾಯಕ ಸ್ವಾಮಿ ದೇವಾಲಯ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದು, ಬಹಳಷ್ಟು ಶಕ್ತಿ ಹೊಂದಿದೆ. ಭಕ್ತರು ಅಂದುಕೊಳ್ಳುವ ಕಾರ್ಯಗಳು ಯಾವುದೇ ತೊಂದರೆ ಇಲ್ಲದೆ ನೆರವೇರುತ್ತದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.
ನೇತೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ದಶರಥ ಮಾತನಾಡಿ, ಗ್ರಾಮದಲ್ಲಿ ಏನೇ ಸಮಸ್ಯೆ, ವ್ಯಾಜ್ಯಗಳಿದ್ದರೂ ಸಹ ಅದನ್ನು ಗಣೇಶನ ದೇವಾಲಯದಲ್ಲಿ ಕೂತು ಬಗೆಹರಿಸಿಕೊಂಡು ಬರಲಾಗುತ್ತಿದೆ. ಇಲ್ಲಿ ನ್ಯಾಯ ಪಂಚಾಯ್ತಿಗೆ ಕುಳಿತಾಗ ಯಾರೂ ಸಹ ಸುಳ್ಳನಾಡುವುದಿಲ್ಲ. ಗಣೇಶನ ಹಬ್ಬವಾದ ನಂತರ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿಸಿಕೊಂಡು ಹೋಗುವ ಪದ್ಧತಿ ಇದೆ ಎಂದರು.
ಈ ವೇಳೆ ಮುಖಂಡರಾದ ಯಾಲಕ್ಕಯ್ಯ,ರಾಜಣ್ಣ, ಅಂಗಡಿ ನಾಗರಾಜ್, ಲಕ್ಷ್ಮೀ, ವಿನಯ್, ಶ್ರೀನಿವಾಸ್, ನಾರಾಯಣಪ್ಪ, ಚಂದ್ರಶೇಖರಯ್ಯ, ಅಂಗಡಿ ಲಕ್ಷ್ಮೀನಾರಾಯಣ್, ಮುಮ್ಮೇನಹಳ್ಳಿ ಜಯರಾಮ್, ಕುಮಾರ್, ಪುರುಷೋತ್ತಮ್, ರವಿಕುಮಾರ್, ರಂಗನಾಥ್, ಪ್ರಕಾಶ್, ರಾಜಣ್ಣ, ಆರ್ಚಕ ವೆಂಕಟೇಶ್, ಆನಂದ್, ನಿವೃತ್ತ ಪಿಡಿಒ ಲಕ್ಷ್ಮೀನಾರಾಯಣ್, ಬಾಲಕೃಷ್ಣ ಜಯರಾಮ್, ಮಹಾಲಕ್ಷ್ಮೀ, ಶಿವಕುಮಾರ್ ಹಾಜರಿದ್ದರು.