ಮಾಗಡಿ: ಪುರಸಭೆ ಖಾತೆಗಳಲ್ಲಿ ಭಾರೀ ಗೋಲ್‌ಮಾಲ್ ನಡೆದಿದ್ದು, ಎಲ್ಲವೂ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಪುರಸಭೆ ಸದಸ್ಯರು ಒಕ್ಕೊರಲಿನಿಂದ ಶಾಸಕ ಎ.ಮಂಜುನಾಥ್ ಅವರಲ್ಲಿ ಒತ್ತಾಯಿಸಿದರು.
ಪಟ್ಟಣದ ಪುರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಹಣ ಪಡೆದು ಒಂದೇ ದಿನದಲ್ಲಿ ಬಾಲಕೃಷ್ಣ ಉದ್ಯಾನವನದ ಮುಂದಿನ ಕಂದಾಯ ಭೂಮಿಯನ್ನು ಪುರಸಭೆಯಲ್ಲಿ ಇ-ಖಾತೆ ಮಾಡಲಾಗಿದೆ. ಕೂಡಲೇ ಖಾತೆಯನ್ನು ವಜಾಗೊಳಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಸದಸ್ಯರಾದ ಎಚ್. ಜೆ.ಪುರುಷೋತ್ತಮ್, ಶಿವಕುಮಾರ್, ಕಾಂತರಾಜ್ ಒತ್ತಾಯಿಸಿದರು.
ಇದಕ್ಕೆ ಶಾಸಕ ಮಂಜುನಾಥ್ ಸಹ ಸಾಥ್ ನೀಡಿ ಇಂದೇ ಖಾತೆ ವಜಾಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಮನೆ ನಿರ್ಮಾಣ: ನಟರಾಜ ಬಡಾವಣೆಯಲ್ಲಿ ಗೋ ಕಟ್ಟೆ ಮತ್ತು ಗೋಮಾಳ ಭೂಮಿಯನ್ನು ಅಕ್ರಮವಾಗಿ ಇ-ಖಾತೆ ಮಾಡಿಕೊಟ್ಟಿದ್ದಾರೆ. ಈಗಾಗಲೇ ಖಾತೆ ಮಾಡಿಸಿಕೊಂಡಿರುವ ವ್ಯಕ್ತಿಗಳಿಂದ ಅಕ್ರಮವಾಗಿ ಮನೆಯನ್ನೂ ಸಹ ಕಟ್ಟಲಾಗುತ್ತಿದೆ ಎಂದು ಸಭೆಯಲ್ಲಿ ಪುರಸಭಾ ಸದಸ್ಯ ಅಶ್ವತ್ಥ್, ನಾಗರತ್ನಮ್ಮ ಆರೋಪಿಸಿ ಅಲ್ಲಿನ ಉದ್ಯಾನವನ, ಸಿಎ ಜಾಗವನ್ನು ಪುರಸಭೆ ಗೆ ವರ್ಗಾಯಿಸಿಕೊಳ್ಳಬೇಕೆಂದು ಆಗ್ರಹಿಸಿದರು.
ಹೊಸಹಳ್ಳಿ ವಡ್ಡರಹಳ್ಳಿ ಬಳಿ ಸಹ ಕಂದಾಯ ಭೂಮಿಗೆ ಇ ಖಾತೆ ಮಾಡಲಾಗಿದೆ ಎಂದು ಹೇಮಲತಾ ಸಭೆಯ ಗಮನಕ್ಕೆ ತಂದರು. ಕೆಶಿಫ್ ರಸ್ತೆ ಭೂಸ್ವಾಧೀನದಲ್ಲೂ ಅವ್ಯವಹಾರ: ಪುರಸಭಾ ವ್ಯಾಪ್ತಿಯ ತಿರುಮಲೆ, ಹೊಸಪೇಟೆ, ಪಟ್ಟಣ, ಸೋಮೇಶ್ವರ ವೃತ್ತದವರೆಗೆ ಕೆಶಿಫ್ ಚತುಷ್ಪಥ ರಸ್ತೆ ಕಾಮಗಾರಿಗೆ ಭೂಸ್ವಾಧೀನಪಡಿಸಲು ಅಕ್ರಮವಾಗಿ ಪುರಸಭಾ ಸ್ವತ್ತನ್ನೇ ವ್ಯಕ್ತಿಗಳ ಹೆಸರಿಗೆ ಇ ಖಾತೆ ಮಾಡಿ, ಹೆಚ್ಚಿನ ಹಣ ಕೊಡಿಸಿ ಸರ್ಕಾರಕ್ಕೂ ವಂಚಿಸಿದ್ದಾರೆ. ಇದನ್ನು ಹಿಂಪಡೆಯಬೇಕೆಂದು ಸದಸ್ಯ ರಂಗಹನುಮಯ್ಯ ಆಗ್ರಹಿಸಿದರು.
ಪುರಸಭಾ ಸ್ವತ್ತು ವಾಪಸ್: ಸರ್ವೆ 69 ರಲ್ಲಿನ 5 ಗುಂಟೆ ಪುರಸಭಾ ಸ್ವತ್ತನ್ನು ವ್ಯಕ್ತಿಗೆ ಖಾತೆಯಾಗಿದ್ದು, ಕೂಡಲೇ ಸ್ಥಳ ತನಿಖೆ ನಡೆಸಿ ಸ್ವತ್ತನ್ನು ವಶಕ್ಕೆ ಪಡೆದು ಬೇಲಿ ಹಾಕಬೇಕೆಂದು ಶಾಸಕರು ಸೂಚಿಸಿದರು. ಖಾತೆಯನ್ನು ಸಹ ರದ್ದುಗೊಳಿಸಬೇಕೆಂದರು. ಕೋರ್ಟ್ ತಡೆಯಾಜ್ಞೆ ಇದ್ದರೂ ಸಹ ಇ ಖಾತೆ ಮಾಡಿಕೊಡಲಾಗುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ಲಮ್ ಬೋರ್ಡ್ ಮನೆಗಳ ಮಾಹಿತಿಯೇ ಇಲ್ಲ: ಯಾವೊಬ್ಬ ಸದಸ್ಯರ ಗಮನಕ್ಕೆ ತರದೆ ಅಧಿಕಾರಿಗಳೇ ಫಲಾನುಭವಿಗಳಿಂದ ಅರ್ಜಿ ಹಾಗೂ ದಾಖಲೆ ಪಡೆದು ಪಟ್ಟಣದಲ್ಲಿ ಮೂರು ಕಾಲೋನಿಗಳಲ್ಲಿ ಸುಮಾರು 60 ಕೋಟಿ ರೂ.ಗೂ ಹೆಚ್ಚು ಅನುದಾನದಡಿ ಸ್ಲಮ್ ಬೋರ್ಡ್ ವತಿಯಿಂದ ಮನೆ ಕಟ್ಟಲಾಗುತ್ತಿದೆ. ಈ ಕುರಿತು ಸಮರ್ಪಕ ಮಾಹಿತಿ ನೀಡುವಂತೆ ಸದಸ್ಯರು ಆಗ್ರಹಿಸಿದರು.
ತೆರಿಗೆ ಸಂಗ್ರಹಿಸಿ: ಪಟ್ಟಣದಲ್ಲಿ ಯುಜಿಡಿ ಪಡೆದುಕೊಂಡಿರುವ ಫಲಾನುಭವಿಗಳಿಂದ ತೆರಿಗೆ ಸಂಗ್ರಹಿಸಲು ಅಧಿಕಾರಿಗೆ ಸದಸ್ಯರ ಸೂಚನೆ ಸೂಚನೆ ನೀಡಿದರು. ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ರಹಮತ್, ಸದಸ್ಯರಾದ ಅನಿಲ್‌ಕುಮಾರ್, ರಿಯಾಜ್, ರೇಖಾ, ವಿಜಯ, ಮಮತಾ,ಶಿವರುದ್ರಮ್ಮ ಮತ್ತು ಮುಖ್ಯಾಧಿಕಾರಿ ಮಹೇಶ್, ಹಾಗೂ ಸಿಬ್ಬಂದಿ ವರ್ಗ ಇತರರು ಇದ್ದರು.
ಪುರಸಭೆ,