Advertisement
ಐಕ್ಯ ಸ್ಥಳ ಪತ್ತೆಯಾಗಿ 4 ವರ್ಷ: ಮಾಗಡಿ ತಾಲೂಕಿನ ಕೆಂಪಾಪುರದಲ್ಲಿ ಹಿರಿಯ ಕೆಂಪೇಗೌಡ ಐಕ್ಯ ಸ್ಥಳ ಪತ್ತೆಯಾಗಿ 4 ವರ್ಷಗಳೇ ಕಳೆದಿದೆ. ರಾಷ್ಟ್ರ ನಾಯಕರು, ರಾಜ್ಯದ ಸಚಿವರು, ಬಿಬಿಎಂಪಿ ಮೇಯರ್, ಸದಸ್ಯರು, ಮಠಾಧೀಶರು, ಕೆಂಪೇಗೌಡ ಅಭಿಮಾನಿಗಳು ಭೇಟಿ ನೀಡಿದ್ದಾರೆ. ಪೂಜೆ ಪುರಸ್ಕಾರಗಳ ಮಾಡಿ ಅವರ ಆದರ್ಶ ತತ್ವಗಳನ್ನು ಹಾಡಿ ಹೊಗಳಿ ಹೋದರು. ಈ ಐಕ್ಯಸ್ಥಳವನ್ನು ಪ್ರವಾಸಿ ತಾಣವನ್ನಾಗಿಸುವುದಾಗಿ ವೇದಿಕೆ ಏರಿ ಮಾರುದ್ದ ಭಾಷಣ ಬಿಗಿದು ಹೋದವರು ಇಲ್ಲಿಯವರೆವಿಗೂ ಒಬ್ಬ ನಾಯಕನಾಗಲಿ ಹಿಂತಿರುಗಿ ನೋಡಿಲ್ಲ. ಕೆಂಪೇಗೌಡ ಪ್ರಾಧಿಕಾರ ರಚನೆ ಮಾಡಿದೆ. ಸರ್ಕಾರ ಸಹ ಕೋಟ್ಯಂತರ ರೂ. ಮಂಜೂರು ಮಾಡಿದ್ದಾಗಿ ಮಾಧ್ಯಮಗಳ ಮೂಲಕ ಪ್ರಚಾರಗಿಟ್ಟಿಸಿಕೊಂಡರು. ಬಿಬಿಎಂಪಿ ಸಹ 5 ಕೋಟಿ ರೂ. ಅನುದಾನ ಮಂಜೂರು ಮಾಡಿರುವುದಾಗಿ ಹೇಳಿಕೆ ಸಹ ನೀಡಿ ನಾಲ್ಕುವರ್ಷಗಳೆ ಕಳೆದಿದೆ. ನಯಾ ಪೈಸೆ ಖರ್ಚಾಗಿಲ್ಲ.
ಇಲ್ಲಿನ ಕೆಂಪಾಪುರದಲ್ಲಿನ ಹಿರಿಯ ಕೆಂಪೇಗೌಡ ಅವರ ಸಮಾಧಿ ಶಿಥಿಲಗೊಂಡಿದೆ. ದಿನೇ ದಿನೆ ಕಾಲನ ಲೀಲೆಗೆ ಕರಗಿ ಹೋಗುತ್ತಿದೆ. ಇದರ ಸಂರಕ್ಷಣೆಗೆ ಸರ್ಕಾರ ಮುಂದಾಗಿಲ್ಲ. ವರ್ಷಕ್ಕೊಮ್ಮೆ ಕೆಂಪೇಗೌಡ ಹೆಸರಿನಲ್ಲಿ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಕೆಂಪೇಗೌಡ ಹೆಸರಿನಲ್ಲಿ ಪ್ರಶಸ್ತಿಗಳನ್ನು ಪ್ರಧಾನ ಮಾಡುತ್ತಿದೆ. ಕೆಂಪೇಗೌಡರ ಕಾಲದ ಪಳಯುಳಿಕೆಗಳ ಸಂರಕ್ಷಣೆ ಮಾಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿÃುವುದು ನಿಜಕ್ಕೂ ಕೆಂಪೇಗೌಡರಿಗೆ ಮಾಡುವ ಅಪಮಾನವಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಇಲ್ಲಿನ ಕೆಂಪಾಪುರದಲ್ಲಿನ ಹಿರಿಯ ಕೆಂಪೇಗೌಡ ಐಕ್ಯ ಸ್ಥಳವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸಬೇಕು. ಅವರ ಕಾಲದ ಎಲ್ಲಾ ಗುಡಿಗೋಪುರಗಳು, ಕೋಟೆ ಕೊತ್ತಲುಗಳು, ಕೆರೆಕಟ್ಟೆ, ಕಲ್ಯಾಣಿಗಳ ಸಂರಕ್ಷಣೆ ಮಾಡುವ ಮೂಲಕ ನಾಡಪ್ರಭು ಕೆಂಪೇಗೌಡರಿಗೆ ಗೌರವ ಸಲ್ಲಿಸಬೇಕು ಎಂದು ಅಭಿಮಾನಿಗಳ ಆಶಯವಾಗಿದೆ.