ಮಾಗಡಿ: ವೇದ, ವಿಜ್ಞಾನ, ಸಂಸ್ಕೃತಿ ದೇಶಕ್ಕೆ ತನ್ನದೇ ಆದ ಮಹತ್ವದ ಕೊಡುಗೆ ನೀಡಿದೆ. ಹಿಂದಿನ ಭಾರತೀಯ ಪರಂಪರೆಯನ್ನು ಉಳಿಸುವುದು ನಮ್ಮ ಕರ್ತವ್ಯ ಎಂದು ತುಮಕೂರಿನ ಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಸೋಲೂರು ಹೋಬಳಿ ಹಕ್ಕಿನಾಳು ಗ್ರಾಮದ ಶ್ರೀತೋಳುಗೈ ಚನ್ನಮ್ಮ ದೇವಿ ದೇವಸ್ಥಾನದ ಸಂಪ್ರೋಕ್ಷಣಾಮತ್ತು ಜೋಡಿ ಬಸವೇಶ್ವರ ಸ್ವಾಮಿ ದೇವಸ್ಥಾನದ ಪ್ರಧಾನ ಕಳಶ ಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿ, ಜಾತಿ, ಭೇದ, ವರ್ಣವಿಲ್ಲದೇ ವೇದ-ವಿಜ್ಞಾನ ಅಧ್ಯಯನ ಮಾಡಬಹುದು. ಇದರಿಂದ ಸ್ವಾರ್ಥ, ದ್ವೇಷ, ಅಸೂಯೆ ತೊರೆದು ಪ್ರೀತಿ- ವಿಶ್ವಾಸದ ಸಮಾಜ ನಿರ್ಮಾಣವಾಗಲು ಅನುಕೂಲವಾಗುತ್ತದೆ. ಮನುಷ್ಯ ಹತ್ತಿದ ಏಣಿ, ಹುಟ್ಟಿನ ಊರನ್ನು ಎಂದಿಗೂ ಮರೆಯಬಾರದು. ಜನ್ಮ ನೀಡಿದ ತಂದೆ- ತಾಯಿ, ಬದುಕು ಕಟ್ಟಿಕೊಟ್ಟ ಗುರು ಪರಂಪರೆಯನ್ನು ಸ್ಮರಿಸುವುದು ಸೇರಿದಂತೆ ಈ ಎಲ್ಲವನ್ನೂ ಮರೆಯದೇ ನಾಡಿನ ಸಾಧಕರನ್ನು ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.
ಪುಣ್ಯದ ಕೆಲಸದಿಂದ ದೇವರನ್ನು ಒಲಿಸಿಕೊಳ್ಳಿ: ಬೆಟ್ಟಹಳ್ಳಿ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅನುಭವದ ಚಿಂತನೆ ಮೈಗೂಡಿಸಿಕೊಂಡಾಗ ಮನುಷ್ಯನ ಜೀವನ ಸಾರ್ಥಕವಾಗುತ್ತದೆ. ಗುರುಗಳ ಉಪದೇಶಗಳ ಬಗ್ಗೆ ಮನುಷ್ಯ ಕಿವಿಕೊಡದೆ ಜ್ಯೋತಿಷಿಗಳನ್ನು ನಂಬಿ, ಇಲ್ಲಸಲ್ಲದ ಆಚರಣೆಗಳನ್ನು ಮಾಡುತ್ತಾ ಗುರು, ಹಿರಿಯರ, ತಂದೆ- ತಾಯಿಯನ್ನು ಮರೆಯುತ್ತಿದ್ದಾರೆ. ಇದು ಸಮಾಜಕ್ಕೆ ಶಾಪವಾಗುತ್ತಿದೆ. ಪೂಜೆಯಿಂದ ಭಗವಂತನನ್ನು ಒಲಿಸಿಕೊಳ್ಳಲು ಅಸಾಧ್ಯ. ನೊಂದವರಿಗೆ ಬೆಳಕು, ಅನಾಥರಿಗೆ ಅನ್ನ ನೀಡುವ ಮೂಲಕ ಹತ್ತಾರು ಪುಣ್ಯದ ಕೆಲಸಗಳಿಂದ ದೇವರನ್ನು ಒಲಿಸಿಕೊಳ್ಳಬಹುದು. ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಯಾವುದೇ ಪವಾಡ ಮಾಡಲಿಲ್ಲ. ಅವರು ಶಿಕ್ಷಣ, ಅನ್ನ ದಾಸೋಹ ನೀಡುವ ಮೂಲಕ ದೇವರಾದವರು ಎಂದು ಸ್ಮರಿಸಿದರು.
ಪೋಷಕರು ಉತ್ತಮ ವ್ಯಕ್ತಿತ್ವ ಬೆಳೆಸಿ: ಪೋಷಕರು ತಮ್ಮ ಮಕ್ಕಳನ್ನು ಬೆಳೆಸುವ ವಿಧಾನದಿಂದ ಬೆಳೆಸಿದರೆ ಮಾತ್ರ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯ. ಫಲಿತಾಂಶದ ಆಧಾರ ಬೇಡ, ವ್ಯಕ್ತಿತ್ವ ಆಧಾರವಾಗಿ ಬೆಳೆಸಿ, ಡಾ.ಬಿ.ಆರ್.ಅಂಬೇಡ್ಕರ್, ಬುದ್ಧ, ಬಸವಣ್ಣ, ವಿವೇಕಾನಂದ, ಗಾಂಧೀಜಿ ಇವರೆಲ್ಲಾ ಸಮಾಜದ ಉದ್ಧಾರಕ್ಕೆ ತಮ್ಮ ಜೀವವನ್ನು ಮುಡಿಪಾಗಿಟ್ಟಿದ್ದರು. ಅಂತಹವರನ್ನು ರೂಪಿಸುವ ಶಕ್ತಿ ನಿಮ್ಮಲ್ಲಿದೆ ಎಂದು ತಿಳಿಸಿದರು.
ಕಲ್ಯಾಣದ ಚಿಂತನೆ ನಮ್ಮ ಜೀವನಕ್ಕೆ ಮಾದರಿ: ಬಂಡೇಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಸಂಸ್ಕಾರಯುತವಾದ ಬೆಳವಣಿಗೆಯಿಂದ ಮಾತ್ರ ನಾಡಿನ ಭವಿಷ್ಯ. ಅತ್ಯುತ್ತಮವಾಗಿ ಸಕಾರಗೊಳ್ಳಲು ಸಾಧ್ಯವಾಗುತ್ತದೆ. 12ನೇ ಶತಮಾನದಲ್ಲಿನ ಅನುಭವ ಮಂಟಪದಲ್ಲಿ ನಡೆದ ಕಲ್ಯಾಣದ ಚಿಂತನೆಗಳು ನಮ್ಮ ಜೀವನಕ್ಕೆ ಮಾದರಿಯಾಗಿದೆ. ಮನುಷ್ಯನಲ್ಲಿ ಸಂಸ್ಕಾರ ಮೂಡಬೇಕಾದರೆ ಮತ್ತೆ ಕಲ್ಯಾಣದ ಅವಶ್ಯವಿದೆ. ಕಟ್ಟುಪಾಡು ಹಾಗೂ ನಿಬಂಧನೆಗಳ ಹಂಗಿಗೆ ಒಳಗಾಗದೆ, ಬದುಕಿನ ನಿಜ ಆನಂದವನ್ನು ಹೊಂದಬೇಕು. ಮಕ್ಕಳಿಗೆ ಕೇವಲ ಶಿಕ್ಷಣ ಕಲಿಸುವುದಕ್ಕಿಂತ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಬೇಕು ಎಂದು ಹೇಳಿದರು.
ಸರ್ಕಾರದ ಮುಖ್ಯ ಅಭಿಯಂತಕ ಡಾ.ಎಚ್.ಎಸ್.ಪ್ರಕಾಶ್ ಮಾತನಾಡಿ, ತಾನು ಹುಟ್ಟಿದ ಊರಿನಲ್ಲಿ ಹತ್ತಾರು ಮಂದಿಗೆ ಅನುಕೂಲವಾಗುವಂತಹ ಕಾರ್ಯಮಾಡಬೇಕು ಎಂಬ ದೃಷ್ಟಿಯಿಂದ ಗ್ರಾಮದ ಎಲ್ಲಾ ಸ್ನೇಹಿತರ ಸಹಕಾರದಿಂದ ಧಾರ್ಮಿಕ ಕಾರ್ಯ ನಡೆಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಗದ್ದುಗೆಮಠ ಮಹಾಂತೇಶ್ವರ ಸ್ವಾಮೀಜಿ, ಹೊನ್ನಮ್ಮ ಗವಿಮಠ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಜಗಣ್ಣಯ್ಯನ ಮಠದ ಚನ್ನಬಸವ ಸ್ವಾಮೀಜಿ, ಮುಖ್ಯ ಅಭಿಯಂತಕ ಮಾಧವ್, ಗುಡೇಮಾರನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಹೇಮಂತ್ ಕುಮಾರ್, ಬಿಜೆಪಿ ಮುಖಂಡ ಬೃಂಗೇಶ್, ನಿವೃತ್ತ ಪಿಡಿಒ ಚಂದ್ರಶೇಖರ್, ದೇವಸ್ಥಾನದ ಅಧ್ಯಕ್ಷ ಚನ್ನಪ್ಪ, ಉಪಾಧ್ಯಕ್ಷೆ ವಿ.ಜಿ.ಶೀಲಾ, ಎನ್.ಪರಮಶಿವಯ್ಯ, ಶಿವಣ್ಣ, ಕೃಷ್ಣಪ್ಪ, ಕೆ.ಶ್ರೀಧರ್, ಸುನೀಲ್ ಕುಮಾರ್, ಮೋಹನ್ ಕುಮಾರ್, ವಿನೋದ್ ಕುಮಾರ್, ಹರ್ತಿ ಪುಟ್ಟರಾಜು ಹಾಜರಿದ್ದರು.