ಮಾಗಡಿ: ಪಟ್ಟಣದಲ್ಲಿರುವ ನಾಡಪ್ರಭು ಕೆಂಪೇಗೌಡ ಕಾಲದ ಕೋಟೆಯ ಜೀರ್ಣೋದ್ದಾರ ಕಾಮಗಾರಿ ಪ್ರಾರಂಭವಾಗಿ 12 ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ಕುಂಟುತ್ತಾ ತೆವಳುತ್ತಾ ಸಾಗಿದೆ. ಕೋಟೆ ಹೆಬ್ಟಾಗಿಲಲ್ಲಿ ನಾಡಪ್ರಭು ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕು. ಅಲ್ಲದೆ, ಶೀಘ್ರದಲ್ಲಿಯೇ ಈ ಕೋಟೆಗೆ ಸುಂದರ ರೂಪ ಕೊಡುವ ಮೂಲಕ ಪ್ರವಾಸಿ ತಾಣವನ್ನಾಗಿಸಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.
ಕೋಟೆ ಗೋಡೆ ಮೇಲೆ ಗಿಡಗಂಟಿಗಳು: ಬೆಂಗಳೂರನ್ನು ನಿರ್ಮಾಣ ಮಾಡಿರುವ ವಿಶ್ವಖ್ಯಾತಿ ಮಾಗಡಿಯ ಕೆಂಪೇಗೌಡರಿಗೆ ಸಲ್ಲುತ್ತದೆ. ಆದರೆ, ನಾಡನ್ನು ಆಳಿದ ಕೆಂಪೇಗೌಡರ ಕೋಟೆಯ ಜೀರ್ಣೋದ್ದಾರದ ಕಾಮಗಾರಿ ಮಾತ್ರ ಕಳೆದ 12 ವರ್ಷಗಳಿಂದ ಆಮೆವೇಗದಲ್ಲಿ ಸಾಗುತ್ತಿದೆ. ಇದರಿಂದ ಕೋಟೆ ಗೋಡೆಯ ಮೇಲೆ ಕುರುಚಲು ಗಿಡಗಂಟಿಗಳು ಬೆಳೆಯುತ್ತಿವೆ. ಕೆಂಪೇಗೌಡ ಕಾಲದ ಪಳಯುಳಿಕೆಗಳನ್ನು ಜೀರ್ಣೋದ್ದಾರಗೊಳಿಸುವ ಮೂಲಕ ಸಂರಕ್ಷಣೆ ಮಾಡುವುದಾಗಿ ಕೆಂಪೇಗೌಡರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ಸಹ ರಚನೆಯಾಗಿ ಮೂರು ವರ್ಷಗಳೇ ಕಳೆದಿದೆ. ಜೀರ್ಣೋದ್ದಾರದ ಜೊತೆಗೆ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ. ಅನುದಾನ ಸಹ ಮಂಜೂರಾಗಿದೆ.
ಅನುದಾನ ಬಳಸಿಲ್ಲ: ರಾಜಕೀಯ ನಾಯಕರು, ಅಧಿಕಾರಿಗಳು ಕೆಂಪೇಗೌಡರ ಆದರ್ಶಗಳ ಬಗ್ಗೆ ಮಾತನ್ನಾಡುತ್ತಾ ಆಡಳಿತ ನಡೆಸುತ್ತಿದ್ದಾರೆ. ಆದರೆ, ಇತಿಹಾಸ ಸಾರುವ ಕೆಂಪೇಗೌಡರ ಕಾಲದ ಕೋಟೆ- ಕೊತ್ತಲು, ಗುಡಿ- ಗೋಪುರಗಳು, ಕೆರೆ- ಕಟ್ಟೆ, ಬಾವಿಗಳು, ಕಲ್ಯಾಣಿಗಳು ಹಾಗೂ ಇಲ್ಲಿನ ಕೆಂಪಾಪುರದಲ್ಲಿರುವ ಹಿರಿಯ ಕೆಂಪೇಗೌಡರ ಸಮಾಧಿ ಜೀರ್ಣೋದ್ದಾರಕ್ಕೆ ಅನುದಾನ ಬಳಸದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ.
ನಾಯಕರಿಗೆ ಇಚ್ಛಾಶಕ್ತಿ ಕೊರತೆ: ಕಳೆದ 15 ವರ್ಷಗಳ ಹಿಂದೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಮಾಗಡಿ ಕೆಂಪೇಗೌಡ ಕೋಟೆ ಜೋರ್ಣೋದ್ದಾರಕ್ಕೆ 18 ಕೋಟಿ ರೂ. ಅನುದಾನ ನೀಡಿದ್ದರು. ಅಂದಿನ ಶಾಸಕರಾಗಿದ್ದ ಎಚ್.ಸಿ.ಬಾಲಕೃಷ್ಣ ಕೋಟೆ ಜೀರ್ಣೋದ್ದಾರಕ್ಕೆ ಎಚ್‌ಡಿಕೆಯಿಂದಲೇ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ, ಇಲ್ಲಿಯವರೆವಿಗೂ ಕೆಂಪೇಗೌಡರ ಕೋಟೆ ಕಾಮಗಾರಿ ಪೂರ್ಣಗೊಂಡಿಲ್ಲ. ಅನುದಾನ ಮತ್ತು ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆಯಿಂದ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ ಎಂಬ ಮಾತು ನಾಗರಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕೋಟೆ ಈಗ ಕುರಿ, ಮೇಕೆ ಸಂತೆ ಮೈದಾನ: ನಾಡಪ್ರಭು ಕೆಂಪೇಗೌಡರ ಅರಮನೆಯ ಕೋಟೆ ಮೈದಾನ ಈಗ ಕೇವಲ ಕುರಿ, ಮೇಕೆ ಸಂತೆಯ ಸ್ಥಳವಾಗಿದೆ. ಜೊತೆಗೆ ರಾಜಕೀಯ ಪಕ್ಷಗಳು ಸಮಾರಂಭ ನಡೆಸಲು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆಯ ಮೈದಾನವಾಗಿ ಬಳಸಿಕೊಳ್ಳಲಾಗುತ್ತಿದೆ. ಕೋಟೆಯೊಳಗೆ ವಿದ್ಯುತ್ ದೀಪದ ಬೆಳಕಿಲ್ಲದಿರುವುದರಿಂದ ಸಂಜೆಯಾಗುತ್ತಿದ್ದಂತೆ ಅನೈತಿಕ ತಾಣವೂ ಆಗುತ್ತಿದೆ.
ಅನುದಾನ ಬಿಡುಗಡೆಯ ವಿಶ್ವಾಸ: ಶಾಸಕ ಎ.ಮಂಜುನಾಥ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೋಟೆ ಜೀರ್ಣೋದ್ದಾರದ ಮನವರಿಕೆ ಮಾಡಿಕೊಡುವ ಮೂಲಕ ವಿಶೇಷ ಅನುದಾನ ಕೋರಿ ಮನವಿ ಸಲ್ಲಿಸಿದರೆ ಸಿಎಂ ವಿಶೇಷ ಅನುದಾನ ಬಿಡುಗಡೆ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಇದರಿಂದ ನಾಡಪ್ರಭು ಕೆಂಪೇಗೌಡರ ಕಾಲದ ಇತಿಹಾಸ ಹೊಂದಿರುವ ಕೋಟೆ ಕಾಮಗಾರಿ ಪೂರ್ಣಗೊಳ್ಳಿಸಲು ಸಾಧ್ಯವಾಗುತ್ತದೆ ಎಂಬುದು ಕೆಲ ಮುಖಂಡರ ಅಭಿಪ್ರಾಯವಾಗಿದೆ.
ಕೋಟೆಯನ್ನು ಪ್ರವಾಸಿ ತಾಣವಾಗಿಸಿ: ಕೆಂಪೇಗೌಡರ ಬೃಹತ್ ಕೋಟೆ ಕಾಮಗಾರಿ ಪೂರ್ಣಗೊಳಿಸುವ ಮೂಲಕ ವಿನೂತನ ರೂಪ ನೀಡಿ ಪ್ರವಾಸಿ ತಾಣವನ್ನಾಗಿಸಬೇಕು. ಇದರಿಂದ ಮಾಗಡಿ ಪಟ್ಟಣದ ಸೌಂದರ್ಯವೂ ಹೆಚ್ಚುತ್ತದೆ. ಕೋಟೆ ಸಂರಕ್ಷಣೆ ಮಾಡಿದ ಕೀರ್ತಿ ಅಧಿಕಾರಿಗಳಿಗೆ ಹಾಗೂ ಸ್ಥಳೀಯರಿಗೆ ಸಲ್ಲುತ್ತದೆ. ಅಲ್ಲದೆ, ಇದು ಇತಿಹಾಸದಲ್ಲಿ ದಾಖಲೆಯಾಗುತ್ತದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಇತಿಹಾಸ ಸಾರುವ ನಾಡಪ್ರಭು ಕೆಂಪೇಗೌಡರ ಕಾಲದ ಕೋಟೆ ಜೀರ್ಣೋದ್ದಾರಗೊಳಿಸಲು ಮುಂದಾಗುವುದೇ ಕಾದು ನೋಡಬೇಕಿದೆ.
ತಿರುಮಲೆ ಶ್ರೀನಿವಾಸ್