ಕನ್ನಡದಲ್ಲಿ ಈಗಾಗಲೇ ವಿಭಿನ್ನವಾಗಿರುವ ಶೀರ್ಷಿಕೆವುಳ್ಳ ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ “ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರವೂ ಸೇರಿದೆ. ಈ ಶೀರ್ಷಿಕೆ ಕೇಳಿದವರಿಗೆ ಇದೊಂದು ಮಜವಾದ ಸಿನಿಮಾ ಅನಿಸುವುದು ಗ್ಯಾರಂಟಿ. ಶೀರ್ಷಿಕೆಯಷ್ಟೇ ಮಜ ಕಥೆಯಲ್ಲೂ ಇದೆ ಎಂಬುದು ನಿರ್ದೇಶಕ ಗೋಪಿ ಕೆರೂರು ಅವರ ಮಾತು. ಈ ಹಿಂದೆ “ರಂಕಲ್ ರಾಟೆ’ ಚಿತ್ರ ನಿರ್ದೇಶಿಸಿದ್ದ ಗೋಪಿ ಕೆರೂರು “ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರಕ್ಕೂ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನ ಮಾಡಿದ್ದಾರೆ.
ಅಂದಹಾಗೆ, ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು, ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಗೋಪಿ ಕೆರೂರು, “ಇದೊಂದು ಮನರಂಜನೆಯ ಸಿನಿಮಾ. “ಮದುವೆ ಮಾಡ್ರೀ ಸರಿ ಹೋಗ್ತಾನೆ’ ಶೀರ್ಷಿಕೆಯಷ್ಟೇ ಸಿನಿಮಾ ಕಥೆ ಕೂಡ ಮಜವಾಗಿಯೇ ಸಾಗುತ್ತದೆ. ಚಿತ್ರಕ್ಕೆ ಶಿವಚಂದ್ರಕುಮಾರ್ ನಾಯಕ ರಾದರೆ ಅವರಿಗೆ ಆರಾಧ್ಯ ನಾಯಕಿ. ಇವರಿಬ್ಬರಿಗೂ ಇದು ಮೊದಲ ಅನುಭವ.
ಉಳಿದಂತೆ ಚಿತ್ರದಲ್ಲಿ ಅರುಣ ಬಾಲರಾಜ್, ರಮೇಶ್ ಭಟ್, ಚಿತ್ಕಲ ಬಿರಾದಾರ್, ಮಿಮಿಕ್ರಿ ಗೋಪಿ, ಕೃಷ್ಣಮೂರ್ತಿ ಕವತಾರ್ ಇತರರು ನಟಿಸಿದ್ದಾರೆ. ಕಥೆ ಕುರಿತು ಹೇಳುವುದಾದರೆ, ಒಂದು ಊರಲ್ಲಿ ಶೋಷಣೆಗೊಳಗಾದ ಕುಟುಂಬವೊಂದರ ಹುಡುಗ ಹೇಗೆ ಇಡೀ ಊರ ಜನರ ಮನಸ್ಸನ್ನು ಗೆಲ್ಲುತ್ತಾನೆ ಎಂಬುದೇ ಕಥೆ. ಸಾಧನೆ ಮಾಡಬೇಕಾದರೆ, ಒಂದು ಹೆಣ್ಣು ಹಿಂದೆ ಇರಲೇಬೇಕು. ಹಾಗೆಯೇ, ಚಿತ್ರದ ಹೀರೋ ಕೂಡ ಪ್ರೀತಿಯಲ್ಲಿ ಬೀಳುತ್ತಾನೆ.
ತನ್ನ ಗುರಿಯನ್ನು ಹೇಗೆ ತಲುಪುತ್ತಾನೆ. ಅವನ ಗುರಿಗೆ ಸಾಥ್ ನೀಡುವರೆಷ್ಟು ಮಂದಿ, ಕಾಲು ಎಳೆಯುವರೆಷ್ಟು ಮಂದಿ ಅನ್ನೋದು ಕಥೆ. ಈ ಕಥೆಗೆ ತಕ್ಕಂತೆಯೇ ಶೀರ್ಷಿಕೆ ಪೂರಕವಾಗಿದೆ. ಆಡು ಭಾಷೆಯಲ್ಲಿ ಮಾತನಾಡುವ ಪದವನ್ನೇ ಚಿತ್ರಕ್ಕೂ ಇಡಲಾಗಿದೆ. ಚಿತ್ರದಲ್ಲಿ ಹನ್ನೊಂದು ಹಾಡುಗಳಿವೆ. ಕೆ.ಕಲ್ಯಾಣ್,ನಾಗೇಂದ್ರ ಪ್ರಸಾದ್ ಒಂದೊಂದು ಹಾಡು ಬರೆದರೆ, ಉಳಿದ ಹಾಡುಗಳಿಗೆ ನಾನು ಸಾಹಿತ್ಯ ಬರೆದಿದ್ದೇನೆ. ಅವಿನಾಶ್ ಬಾಸೂತ್ಕರ್ ಸಂಗೀತವಿದೆ.
ಸುರೇಶ್ ಬಾಬು ಛಾಯಾಗ್ರಹಣವಿದೆ. ವೆಂಕಿ ಯುಡಿವಿ ಸಂಕಲನ ಮಾಡಿದ್ದಾರೆ. ಗಂಗಾವತಿಯ ಶಿವರಾಜ್ ಲಕ್ಷ್ಮಣ್‌ರಾವ್ ದೇಸಾಯಿ ಚಿತ್ರವನ್ನು ನಿರ್ಮಿಸಿದ್ದು, ಇವರಿಗೂ ಇದು ಮೊದಲ ನಿರ್ಮಾಣದ ಚಿತ್ರ. ಚಿತ್ರದಲ್ಲಿ ಶಾನ್, ಸಂಚಿತ್ ಹೆಗ್ಡೆ, ಅನನ್ಯ ಭಟ್ ಇತರರು ಹಾಡಿದ್ದಾರೆ. ಬಾಗಲಕೋಟೆ, ಕೆರೂರು, ಬೆಂಗಳೂರು, ಹಾಲಿಗೇರಿ, ಮುಚ್‌ಕಂಡಿ ಇತರೆಡೆ ಚಿತ್ರೀಕರಿಸಲಾಗಿದೆ. ಶೀಘ್ರದಲ್ಲೇ ಆಡಿಯೋ ರಿಲೀಸ್ ಮಾಡಲಿದ್ದು, ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ.