ಹೊಸದಿಲ್ಲಿ : ಮುಂಬಯಿ, ಪಶ್ಚಿಮ ಬಂಗಾಲ ಮತ್ತು ಉತ್ತರ ಪ್ರದೇಶದ ಬಳಿಕ ಇದೀಗ ಮಧುರೆಯ 19 ವರ್ಷದ ಕಾಲೇಜು ವಿದ್ಯಾರ್ಥಿಯೋರ್ವ ಮಾರಣಾಂತಿಕ “ಬ್ಲೂ ವೇಲ್ ಚ್ಯಾಲೆಂಜ್’ ಆನ್‌ಲೈನ್ ಗೇಮಿಗೆ ಬಲಿಯಾಗಿದ್ದಾನೆ.
ಮೃತ ವಿದ್ಯಾರ್ಥಿ ವಿಘ್ನೇಶ್ ತನ್ನ ಮನೆಯಲ್ಲಿ ನಿನ್ನೆ ಬುಧವಾರ ಮಧ್ಯಾಹ್ನ 4.15ರ ಹೊತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ವಿಘ್ನೇಶನ ಎಡಗೈಯಲ್ಲಿ ವೇಲ್ ಆಕೃತಿಯ ಚಿತ್ರ ಕೊರೆದಿರುವುದು ಕಂಡು ಬಂದಿದ್ದು ಅದರಡಿ ಬ್ಲೂವೇಲ್ ಎಂಬ ಬರಹ ಗೋಚರವಾಗಿದೆ.
ಇಂಡಿಯಾ ಟುಡೇ ಮಾಡಿರುವ ವರದಿಯ ಪ್ರಕಾರ ವಿಘೇಶ್ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ಆತ “ಬ್ಲೂವೇಲ್ – ಇದೊಂದು ಕೇವಲ ಆಟವಲ್ಲ – ಪ್ರಾಣಕ್ಕೆ ಸಂಚಕಾರ – ನೀವು ಇದರೊಳಗೆ ಪ್ರವೇಶಿಸಿದಿರೆಂದರೆ ನಿಮಗೆ ಮತ್ತೆ ಹೊರಬರಲು ಮಾರ್ಗವೇ ಇಲ್ಲ” ಎಂದು ಬರೆದಿದ್ದಾನೆ.
ವಿಘೇಶ್ ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿ. ಅಂತೆಯೇ ತಮಿಳು ನಾಡಿನಲ್ಲಿ ಮಾರಣಾಂತಿಕ ಬ್ಲೂವೇಲ್ ಇಂಟರ್‌ನೆಟ್ ಗೇಮಿಗೆ ಬಲಿಯಾಗಿರುವ ತಮಿಳು ನಾಡಿನ ಮೊದಲ ವಿದ್ಯಾರ್ಥಿಯಾಗಿದ್ದಾನೆ.
50 ದಿನಗಳ ಡೆಡ್ಲಿ ಬ್ಲೂವೇಲ್ ಆನ್‌ಲೈನ್ ಚ್ಯಾಲೆಂಜ್ ಒಟ್ಟು 50 ದಿನಗಳ ಆಟ. ಈ 50 ದಿನಗಳಲ್ಲಿ ಆತ ಅನಾಮಿಕ ನಿಯಂತ್ರಕನೋರ್ವ ಸೂಚಿಸುವ ಪ್ರಕಾರ ಒಂದೊಂದು ಬಗೆಯ ಸಾಹಸ ಕಾರ್ಯ ಮಾಡಬೇಕಾಗುತ್ತದೆ. ಅಂತಿಮವಾಗಿ ಅದು ಪ್ರಾಣ ಬಲಿ ಪಡೆಯುವ “ಸಾಹಸ ಕಾರ್ಯ’ ಕೈಗೊಳ್ಳಲು ಸೂಚಿಸುತ್ತದೆ.