ಗಜೇಂದ್ರಗಡ: ಮದರಸಾಗಳು ಇಸ್ಲಾಂ ಬೋಧನೆ, ಪವಿತ್ರ ಕುರಾನ್ ಕಲಿಕೆ, ಪ್ರವಾದಿಗಳ ಜೀವನ ಮಾಹಿತಿ ನೀಡುವ ಪವಿತ್ರ ಜ್ಞಾನ ಕೇಂದ್ರಗಳಾಗಿವೆ. ಈ ನಿಟ್ಟಿನಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಮದರಸಾಗಳಿಗೆ ಮಕ್ಕಳನ್ನು ಸೇರ್ಪಡೆಗೊಳಿಸುವ ಮೂಲಕ ಸೇವಾ ಮನೋಭಾವನೆ ಒಡಮೂಡುವಂತೆ ಮಾಡಲು ಮುಂದಾಗಬೇಕು ಎಂದು ಹುಬ್ಬಳ್ಳಿಯ ಹಜರತ್ ಮಹಮ್ಮದ ಇಂಬ್ರಾನ್ ಅಶ್ರಫಿ ಹೇಳಿದರು.
ಮದರಸಾಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಿವೆ. ಇಲ್ಲಿ ಆಡಂಬರಕ್ಕೆ ಅವಕಾಶವಿಲ್ಲ. ಧರ್ಮ ಬೋಧನೆಗೆ ಅದರದ್ದೆ ಆದ ರೀತಿ ನಿಯಮಗಳಿವೆ. ಸುಳ್ಳು ಹೇಳಬಾರದು. ಇತರರನ್ನು ದೂಷಿಸಬಾರದು. ನಾಲಗೆಯನ್ನು ಹಿಡಿತದಲ್ಲಿರಿಸಿಕೊಳ್ಳಬೇಕೆಂಬ ಪ್ರವಾದಿಗಳ ಮಾತನ್ನ ಇಲ್ಲಿ ಕಲಿಸಲಾಗುವುದು. ಮದರಸಾ ಬಗ್ಗೆ ಟೀಕಿಸುವವರು ಇತಿಹಾಸ ಅರಿತು ಮಾತನಾಡಬೇಕು. ಇಸ್ಲಾಂ ಬಗ್ಗೆ ಹಲವಾರು ಜನರು ತಪ್ಪು ಕಲ್ಪನೆ ಹೊಂದಿದ್ದಾರೆ. ಆದರೆ ಇಸ್ಲಾಂ ಸರ್ವಧರ್ಮ ಸಮನ್ವಯತೆ ಸಾರುವ ಬಹುದೊಡ್ಡ ಧರ್ಮವಾಗಿದೆ. ಶಾಂತಿ, ದಾನ, ಧರ್ಮದಂತಹ ಸಂದೇಶ ಸಾರುವ ಇಸ್ಲಾಂ ಬಗ್ಗೆ ಜನರಲ್ಲಿರುವ ಕಲ್ಪನೆಗಳನ್ನು ತೊಡೆದು ಹಾಕಲು ಮದರಸಾಗಳು ಸಹಕಾರಿಯಾಗಿವೆ ಎಂದರು.
ಜಾಮೀಯಾ ಮಸೀದಿಯ ಹಜರತ್ ಅಲ್ಲಮಾ ಮೌಲಾನ ಖುಷ್ತರ ನುರಾನಿ ಮಾತನಾಡಿ, ಪುಣ್ಯ ಹಾಗೂ ದೇವ ಭಯದ ಕಾರ್ಯದಲ್ಲಿ ಎಲ್ಲರ ಜೊತೆ ಒಗ್ಗೂಡಿ. ಆದರೆ ಪಾಪ ಹಾಗೂ ಅತಿರೇಕದ ಕಾರ್ಯಗಳಲ್ಲಿ ಯಾರೊಂದಿಗೂ ಸಹಕರಿಸಬೇಡಿ. ಇಸ್ಲಾಮಿನ ತತ್ವಗಳ ಪಾಠ ಕಲಿತವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಮದರಸಾಗಳು ಭಾವೈಕ್ಯತೆ ಮತ್ತು ಸಾಮರಸ್ಯದ ಪಾಠ ಕೊಡುವ ಕೇಂದ್ರಗಳಾಗಿವೆ. ಮದರಸಾಗಳೆಂದರೆ ಕೇವಲ ಧರ್ಮದ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳಲ್ಲ. ಬದಲಾಗಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡುವ ಶಿಕ್ಷಣ ಕೇಂದ್ರವಾಗಿವೆ. ಮದರಸಾಗಳು ನಿನ್ನೆ-ಮೊನ್ನೆ ಜನ್ಮ ತಾಳಿದ್ದಲ್ಲ. ಸಾವಿರಾರು ವರ್ಷಗಳ ಇತಿಹಾಸ ಹೊಂದಿವೆ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಖುರಾನ್ ಹದಿಯಾ ಕಾರ್ಯಕ್ರಮ ಜರುಗಿತು. ಮೌಲಾನಾ ಮಹಮ್ಮದ ಯಾಸೀನ್ ಅಶ್ರಫಿ, ಮೌಲಾನಾ ಖಲೀಲ ಖಾಜಿ, ಮೌಲಾನಾ ಮಹಮ್ಮದ ರಫೀಕ್ ಅಶ್ರಫಿ, ಹಾಫಿಜ್ ತೌಸೀಫ್ ರಜಾ, ಹಾಜಿ ಪಿ.ಕೆ ಬಾಗವಾನ, ರಾಜು ಆರಗಿದ್ದಿ, ಮೆಹಬೂಬ ಮುದಗಲ್ಲ, ಮಹಮ್ಮದಯಾಸೀನ ಮಾರನಬಸರಿ, ಆಸೀಫ್ ತಟಗಾರ, ಬಾಷೇಸಾಬ ಮಕಾನದಾರ, ರಿಯಾಜ್ ಗಾಡಿವಾಲೆ, ಮಿರ್ಜಾಗಾಲಿಬ್ ತಾಳಿಕೋಟಿ, ಸಲೀಂ ಬಾಗಲಕೋಟ, ಅಲಿ ಕಿಲ್ಲೇದಾರ, ಮಕ್ತುಮ ಅಂಗಡಿ ಇದ್ದರು.
Advertisement
ಪಟ್ಟಣದ ಅಂಜುಮನ್ ಶಾದಿಮಹಲ್ನಲ್ಲಿ ಗೌಸೆ ಆಜಂ ಎಜ್ಯೋಕೇಶನ್ ಆ್ಯಡ್ ಚಾರಿಟೇಬಲ್ ಟ್ರಸ್ಟ್‌ನ ದಾರುಲ್ ಉಲುಮ್ (ಅರಬ್ಬಿ ಮದರಸಾ ವಸತಿ ಶಾಲೆ) ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
Related Articles
Advertisement