ಚೆನ್ನೈ:ಭಾರೀ ಮಳೆ ಸುರಿದ ಸಂದರ್ಭದಲ್ಲಿ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸುವ ಸಮರ್ಪಕ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಗ್ರೇಟರ್ ಚೆನ್ನೈ ಕಾರ್ಪೋರೇಶನ್ ಅಧಿಕಾರಿಗಳನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ(ನವೆಂಬರ್ 09) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಪ್ರತಿವರ್ಷ ಮಳೆಗಾಲದಲ್ಲಿ ಚೆನ್ನೈ ನಗರದಲ್ಲಿ ರಸ್ತೆ ತುಂಬಾ ನೀರು ಹಾಗೂ ತಗ್ಗು ಪ್ರದೇಶ ಜಲಾವೃತವಾಗುತ್ತಿದೆ. ಈ ಬಾರಿಯೂ ಸುರಿದ ಧಾರಾಕಾರ ಮಳೆಗೆ ಐವರು ಸಾವನ್ನಪ್ಪಿದ್ದು, ಹಲವಾರು ಮನೆಗಳು ಹಾನಿಗೊಂಡಿರುವ ಘಟನೆ ನಡೆದಿತ್ತು.
2015ರ ವಿನಾಶಕಾರಿ ಪ್ರವಾಹದ ನಂತರ ಕಳೆದ ಆರು ವರ್ಷಗಳಿಂದ ಮಹಾನಗರ ಪಾಲಿಕೆ ಏನು ಮಾಡಿದೆ ಎಂಬುದು ತಿಳಿಯಬೇಕಾಗಿದೆ. ಒಂದು ವೇಳೆ ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ವಿಫಲರಾದರೆ ಮಹಾನಗರ ಪಾಲಿಕೆ ವಿರುದ್ಧ ಸ್ವಯಂ ಆಗಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಕಳೆದ ಶನಿವಾರದಿಂದ ಚೆಂಗಲ್ ಪೆಟ್, ಕಾಂಚಿಪುರಂ ಹಾಗೂ ತಿರುವಳ್ಳೂರ್ ಜಿಲ್ಲೆಗಳಲ್ಲಿ ಹಾಗೂ ಚೆನ್ನೈನಲ್ಲಿ ಭಾರೀ ಮಳೆ ಸುರಿದಿದ್ದು, ಹಲವೆಡೆ ಜಲಾವೃತವಾಗಿತ್ತು. ಈ ಘಟನೆ ನಂತರ ಕೋರ್ಟ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ ಎಂದು ವರದಿ ಹೇಳಿದೆ.
ಭಾರೀ ಮಳೆ ಮತ್ತು ಪ್ರವಾಹ ಸಂಬಂಧಿ ಘಟನೆಯಲ್ಲಿ ಕನಿಷ್ಠ 5 ಮಂದಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಅಲ್ಲದೇ 260 ಹೆಚ್ಚು ಗುಡಿಸಲು ಮತ್ತು 70ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿದೆ. ಭಾರೀ ಮಳೆಯಿಂದಾಗಿ ಚೆನ್ನೈನ ರಸ್ತೆಗಳು ಸಂಪೂರ್ಣ ಜಲಾವೃತಗೊಂಡು, ಜನರು ಸಂಚರಿಸಲು ಪರದಾಡುವಂತಾಗಿತ್ತು.