ಚೆನ್ನೈ : “ರಾಜ್ಯದ ಎಲ್ಲ ರೈತರ ಸಾಲ ಮನ್ನಾ ಮಾಡಬೇಕು; ಇದರ ಲಾಭವನ್ನು ಐದು ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಮಾತ್ರವೇ ಸೀಮಿತ ಮಾಡಕೂಡದು’ ಎಂದು ಮದ್ರಾಸ್ ಹೈಕೋರ್ಟ್ ಇಂದು ಮಂಗಳವಾರ ತಮಿಳು ನಾಡು ಸರಕಾರಕ್ಕೆ ಹೇಳಿದೆ.
ಬೆಳೆ ಸಾಲದ ಸುಸ್ತಿಗಾರರಾಗಿರುವ ಯಾವುದೇ ರೈತನ ವಿರುದ್ಧ ವಸೂಲಾತಿ ಕ್ರಮ ನಡೆಸಕೂಡದು ಎಂದು ನ್ಯಾಯಾಲಯವು ಅಧಿಕಾರಿಗಳನ್ನು ನಿರ್ಬಂಧಿಸಿದೆ.
ಮದ್ರಾಸ್ ಹೈಕೋರ್ಟ್‌ನ ಈ ತೀರ್ಪಿನಿಂದಾಗಿ ತಮಿಳು ನಾಡು ಸರಕಾರಕ್ಕೆ 1,980 ಕೋಟಿ ರೂ.ಗಳ ಹೆಚ್ಚುವರಿ ಹಣಕಾಸು ಹೊರೆ ಉಂಟಾಗಲಿದೆ. ಆದರೆ ನ್ಯಾಯಾಲಯದ ಈ ಆದೇಶದಿಂದ “ಇತರ ವರ್ಗ’ಕ್ಕೆ ಸೇರುವ ಸುಮಾರು 3.01 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ.
2016ರ ಜೂನ್ 28ರಂದು ಕೋರ್ಟ್ ನೀಡಿದ್ದ ಇದೇ ರೀತಿಯ ಆದೇಶದಿಂದ ತಮಿಳು ನಾಡು ಸರಕಾರಕ್ಕೆ 5,780 ಕೋಟಿ ರೂ. ಹೊರೆ ಬಿದ್ದಿತ್ತು. ಆದರೆ ಇದರಿಂದ 2.5 ಎಕರೆಯಿಂದ 5 ಎಕರೆ ವರೆಗೆ ಭೂ ಹಿಡುವಳಿ ಹೊಂದಿದ್ದ 16.94 ಲಕ್ಷ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಲಾಭವಾಗಿತ್ತು.
ರೈತರ ಸಾಲ ಮನ್ನಾ ಮಾಡುವಾಗ ಐದು ಎಕರೆಗಿಂತ ಕಡಿಮೆ ಭೂಹಿಡುವಳಿ ಹೊಂದಿದ ರೈತರಿಗೆ ಮಾತ್ರವೇ ಅದರ ಲಾಭ ಸಿಗುವಂತೆ ಸರಕಾರ ವರ್ಗೀಕರಣ ಮಾಡಿರುವುದು ತಾರತಮ್ಯದ ಕೃತ್ಯವಾಗಿದೆ ಎಂದು ಜಸ್ಟಿಸ್ ಎಸ್ ನಾಗಮುತ್ತು ಮತ್ತು ಜಸ್ಟಿಸ್ ಎಂ ವಿ ಮುರಳೀಧರನ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿತು.
2016ರ ಮಾರ್ಚ್ 31ರ ವರೆಗೆ ಪ್ರಾಥಮಿಕ ಕೃಷಿ ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆದಿದ್ದ ರಾಜ್ಯದ ಎಲ್ಲ ರೈತರಿಗೆ ಮದ್ರಾಸ್ ಹೈಕೋರ್ಟಿನ ಈ ಸಾಲಮನ್ನಾ ಆದೇಶ ಅನ್ವಯವಾಗುತ್ತದೆ.