Advertisement

ಡಂಪಿಂಗ್‌ ಯಾರ್ಡ್‌ ಆಗುತ್ತಿದೆ ಮಡಿವಾಳರ ಕೆರೆ

01:30 AM Dec 04, 2018 | Karthik A |

ವಿಶೇಷ ವರದಿ : ಗಂಗೊಳ್ಳಿ: ಇಲ್ಲಿನ ಬೀಚ್‌ ಬಳಿ ಚರ್ಚ್‌ ರಸ್ತೆಗೆ ತಾಗಿಕೊಂಡಿರುವ ಮಡಿವಾಳರ ಕೆರೆ ಈಗ ಕಸ ಎಸೆಯುವ ಡಂಪಿಂಗ್‌ ಯಾರ್ಡ್‌ ಆಗುತ್ತಿದ್ದು, ತಡೆಗೋಡೆಯೂ ಇಲ್ಲದೇ ಅಪಾಯ ಆಹ್ವಾನಿಸುವಂತಿದೆ. ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಂಚಿನಲ್ಲೇ ಇರುವ ಈ ಕೆರೆಯ ಹೂಳು ತೆಗೆಯುವ ಕೆಲಸ ಹಲವು ವರ್ಷಗಳಿಂದ ನಡೆದೇ ಇಲ್ಲ. ಕೆರೆಯ ಸುತ್ತಲೂ ತ್ಯಾಜ್ಯ, ಪ್ಲಾಸ್ಟಿಕ್‌ ತುಂಬಿ ಹೋಗಿವೆ. ಅದಲ್ಲದೆ ಕೆರೆಯ ಬಹುಭಾಗ ಅತಿಕ್ರಮಗೊಂಡಿದೆ.

Advertisement

ಕೆರೆಯ ಸಮೀಪವೇ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿದ್ದು ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಶಾಲೆಗೆ ಬರುತ್ತಾರೆ. ಮೀನುಗಾರಿಕಾ ಬಂದರು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ  ರಸ್ತೆ ಯಾಗಿದ್ದರಿಂದ ಲಾರಿ ಸಹಿತ ನೂರಾರು ವಾಹನಗಳು ಸಂಚರಿಸುತ್ತಿರುತ್ತದೆ. ರಸ್ತೆ ಮತ್ತು ಕೆರೆಯ ನಡುವೆ ಕೇವಲ 4-5 ಅಡಿ ಮಾತ್ರ ಅಂತರವಿದ್ದು, ರಸ್ತೆಯಲ್ಲಿ ಎರಡು ವಾಹನ ಸಂಚರಿಸಲು ಸಾಧ್ಯವಿಲ್ಲ. ವಾಹನ ಸವಾರರ ಎಚ್ಚರ ತಪ್ಪಿದರೆ ವಾಹನ ಕೆರೆಗೆ ಬೀಳುವ ಸಾಧ್ಯತೆ ಇದೆ. ರಸ್ತೆಯ ಇನ್ನೊಂದು ಪಾರ್ಶ್ವದಲ್ಲಿ ಸುಮಾರು 5-6 ಅಡಿ ಆಳದ ಗುಂಡಿಯಿದ್ದು ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾದ ಸಂದಿಗ್ಧ ಸ್ಥಿತಿಯಿದೆ. ಕೆರೆಯ ಆಸುಪಾಸಿನಲ್ಲಿ ಸೂಚನಾ ಫಲಕಗಳೂ ಇಲ್ಲ. ರಸ್ತೆ ಕಾಂಕ್ರೀಟಿಕರಣವಾಗಿದ್ದರೂ ಕೆರೆಗೆ ಮಾತ್ರ ಈವರೆಗೆ ಯಾವುದೇ ತಡೆಗೋಡೆ ನಿರ್ಮಿಸಿಲ್ಲ.

ಆದರೆ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತ್‌ ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧ ಇಲ್ಲ ಎನ್ನುವಂತೆ ಇದ್ದಾರೆ. ಗ್ರಾಮಸಭೆಗಳಲ್ಲಿ ಈ ವಿಚಾರ ಪ್ರಸ್ತಾವ‌ವಾಗಿದ್ದರೂ ಯಾವುದೇ ಕೆಲಸ ನಡೆದಿಲ್ಲ. ಕೆರೆಯ ಸುತ್ತಲೂ ತ್ಯಾಜ್ಯ ಎಸೆಯುತ್ತಿ ರುವುದನ್ನು ತಡೆಯುವಂತೆ ಮಾಡಿದ ಮನವಿಗೂ ಬೆಲೆಯೇ ಇಲ್ಲದಂತಾಗಿದೆ. ಇದಕ್ಕಿಂತ ಮುಖ್ಯವಾಗಿ ಕೆರೆಯು ರಸ್ತೆಗೆ  ತಾಗಿಕೊಂಡಿರುವುದರಿಂದ ಈ ಭಾಗದಲ್ಲಿ ಭದ್ರತಾ ಬೇಲಿ ಅಳವಡಿಸಬೇಕಾದ ಆವಶ್ಯಕತೆ ಇದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಅಪರಿಚಿತರು ಕಸ ಎಸೆಯುತ್ತಾರೆ
ಇದು ರಸ್ತೆಯ ಬದಿಯೇ ಇರುವ ಕೆರೆಯಾಗಿರುವುದರಿಂದ ಅಪರಿಚಿತರು ವಾಹನದಲ್ಲಿ ಬಂದು ಕಸ ಎಸೆದು ಹೋಗುತ್ತಿರುವುದು ಕಂಡು ಬರುತ್ತಿದೆ. ಇದೊಂದು ರೀತಿಯಲ್ಲಿ ಗಂಗೊಳ್ಳಿಯ ಡಂಪಿಂಗ್‌ ಯಾರ್ಡ್‌ ಆಗಿದೆ. ಸೂಕ್ತ ತಡೆಗೋಡೆಯನ್ನಾದರೂ ನಿರ್ಮಿಸಿದಲ್ಲಿ ಸಂಭಾವ್ಯ ಅನಾಹುತ ಮಾತ್ರವಲ್ಲದೆ, ಕಸ ಎಸೆಯುವುದನ್ನು ತಡೆಯಬಹುದು ಎನ್ನುವುದು ಇಲ್ಲಿನ ಜನರ ಆಗ್ರಹ.

ಸೂಕ್ತ ಕ್ರಮ
ಗಂಗೊಳ್ಳಿ ಚರ್ಚ್‌ ಬಳಿ ಇರುವ ಕೆರೆಗೆ ಭದ್ರತಾ ಬೇಲಿ, ಸೂಚನಾ ಫಲಕ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಕೆರೆಯ ಸಮೀಪ ತ್ಯಾಜ್ಯ ವಿಲೇವಾರಿ ಮಾಡದಂತೆ ಸುತ್ತಮುತ್ತಲಿನ ಜನರಲ್ಲಿ ಮನವಿ ಮಾಡಲಾಗಿದ್ದು, ತ್ಯಾಜ್ಯ ವಿಲೇವಾರಿ ತಡೆಯಲು ಕೂಡಲೇ ಸೂಕ್ತ ಕ್ರಮಕೈಗೊಳ್ಳಲಾಗುವುದು.
–  ಬಿ. ಮಾಧವ, ಪಿಡಿಒ, ಗಂಗೊಳ್ಳಿ ಗ್ರಾ. ಪಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next