Advertisement

ಮಡಿಕೇರಿ: ಗಣರಾಜ್ಯೋತ್ಸವ

08:01 PM Jan 26, 2020 | Sriram |

ಮಡಿಕೇರಿ: ಸ್ವಾತಂತ್ರ್ಯ, ಸಮಾನತೆ, ಭಾÅತೃತ್ವಗಳ ಅಡಿಗಲ್ಲಿನ ಮೇಲೆ ಪ್ರಜಾಸತ್ತಾತ್ಮಕ ಗಣರಾಜ್ಯದ ಕಲ್ಪನೆಯನ್ನು ಅರ್ಥೈಸಿಕೊಳ್ಳುವುದರೊಂದಿಗೆ, ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ನೀತಿಯೊಂದಿಗೆ ಯಾವುದೇ ಭೇದ ಭಾವವಿಲ್ಲದೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೊಡಿಸೋಣ ಎಂದು ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಕರೆ ನೀಡಿದರು.

Advertisement

ನಗರದ ಜನರಲ್‌ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ 71ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.

ಕೊಡಗು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸರಕಾರ ಕಟಿಬದ್ಧವಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಪ್ರಕೃತಿ ವಿಕೋಪದಿಂದ ನಲುಗಿರುವ ಕೊಡಗಿನ ಪುನರ್‌ ನಿರ್ಮಾಣಕ್ಕಾಗಿ ಜಿಲ್ಲೆಗೆ ಈಗಾಗಲೇ 100 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ನ್ನು ಬಿಡುಗಡೆ ಮಾಡಿದ್ದು, ವಿವಿಧ ಪುನರ್‌ ನಿರ್ಮಾಣ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಹೇಳಿದರು.ಕಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ಸಂಸ್ಥಾನಗಳಾಗಿ ಹರಿದು ಹಂಚಿಹೋಗಿದ್ದ ಅನೇಕ ರಾಜ ಮಹಾರಾಜರ ಆಳ್ವಿಕೆಗೆ ಒಳಪಟ್ಟು ಚಿಕ್ಕಪುಟ್ಟ ಸಂಸ್ಥಾನಗಳಾಗಿ ತಮ್ಮದೇ ಆದ ವೈಶಿಷ್ಟ್ಯವನ್ನು ಒಳಗೊಂಡಿದ್ದ ಪ್ರಾಂತ್ಯಗಳೆಲ್ಲವನ್ನೂ ಸ್ವಾತಂತ್ರ್ಯ ನಂತರದಲ್ಲಿ ಸರ್ದಾರ್‌ ವಲ್ಲಭಭಾಯ್‌ ಪಟೇಲರ ನೇತೃತ್ವದಲ್ಲಿ ಒಗ್ಗೂಡಿಸಿ ಒಂದೇ ಆಡಳಿತ ವ್ಯವಸ್ಥೆಯೊಳಗೆ ತರಲಾಯಿತು. ಹೀಗೆ ಒಗ್ಗೂಡಿದ ಭಾರತಕ್ಕೆ ಅಗತ್ಯವಿದ್ದ ಸಂವಿಧಾನ ರಚನೆಗೆ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ನೇತೃತ್ವದಲ್ಲಿ ಸಂವಿಧಾನ ರಚನಾ ಸಮಿತಿಯನ್ನು ರಚಿಸಿ, ಅದರ ಮೂಲಕ ಅಂಬೇಡ್ಕರ್‌ ಅವರಿಂದ ರಚಿಸಲ್ಪಟ್ಟ ಸಂವಿಧಾನವನ್ನು 1949ರ ನ.26ರಂದು ಅಂಗೀಕರಿಸಲಾಯಿತು. ಆದರೆ ಅದನ್ನು 1950ರ ಜನವರಿ 26ರಿಂದ ಜಾರಿಗೆ ತರಲಾಯಿತು ಎಂದು ಗಣರಾಜ್ಯೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಅನೀಸ್‌ ಕಣ್ಮಣಿ ಜಾಯ್‌ ವಿವರಿಸಿದರು.

ಸಂವಿಧಾನ ಜಾರಿಗೆ ಬಂದು ರಾಜ ಪ್ರಭುತ್ವ ಕೊನೆಗೊಂಡು ನಿಜವಾದ ಅರ್ಥದದಲ್ಲಿ ಪ್ರಜಾಸತ್ತಾತ್ಮಕ, ಸಮಾಜವಾದಿ, ಸಾರ್ವಭೌಮ ಗಣರಾಜ್ಯವಾಗಿ ರೂಪುಗೊಂಡ ಭಾರತ ಕಳೆದ 70 ವರ್ಷಗಳ ಅವಧಿಯಲ್ಲಿ ಅಪಾರ ಪ್ರಗತಿಯನ್ನು ಸಾಧಿಸಿದೆ. ಈ ದೇಶದ ಸರಕಾರಗಳು ಎಲ್ಲಾ ಜಾತಿ, ಧರ್ಮ, ಭಾಷೆಗಳ ಗಡಿಗಳನ್ನು ಮೀರಿ ಸರ್ವ ಜನರ ಹಿತಕ್ಕಾಗಿ ಶ್ರಮಿಸುತ್ತಿವೆ ಎಂದು ಅವರು ಹೇಳಿದರು.

ಧ್ವಜಾರೋಹಣದ ಬಳಿಕ ಪಥಸಂಚಲನದ ಪರಿವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿಗಳು ವಂದನೆ ಸ್ವೀಕರಿಸಿದರು. ಪೆರೇಡ್‌ ಕಮಾಂಡರ್‌ ರಾಚಯ್ಯ ಅವರ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ದಳ, ಸಿವಿಲ್‌ ಪೊಲೀಸ್‌, ಗೃಹರಕ್ಷಕ ದಳ, ಅರಣ್ಯ ಇಲಾಖೆ, ನಗರದ ವಿವಿಧ ಶಾಲೆ ಕಾಲೇಜುಗಳ ಎನ್‌ಸಿಸಿ, ಸ್ಕೌಟ್‌ ಮತ್ತು ಗೈಡ್ಸ್‌, ಸೇವಾದಳ ಸೇರಿದಂತೆ ಸುಮಾರು 20 ತಂಡಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದವು.ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯ, ಮಡಿಕೇರಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಲಿಟ್ಲ ಫ್ಲವರ್‌ ವಿದ್ಯಾಸಂಸ್ಥೆ, ಬಸವನಹಳ್ಳಿಯ ಆಶ್ರಮ ಶಾಲೆ, ಮಡಿಕೇರಿಯ ಸಂತ ಜೋಸೆಫ‌ರ ಶಾಲೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ನಡೆಯಿತು. ವಿಶೇಷವಾಗಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಬಸವನಹಳ್ಳಿ ಆಶ್ರಮ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನಸೆಳೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next