ಮಡಿಕೇರಿ: ತಡೆಗೋಡೆ ನಿರ್ಮಾಣಕ್ಕಾಗಿ ಮಣ್ಣು ಅಗೆಯುತ್ತಿದ್ದ ಸಂದರ್ಭ ಬರೆ ಕುಸಿದು ಬಿದ್ದು, ಮಣ್ಣಿನಡಿ ಸಿಲುಕಿದ ಇಬ್ಬರು ಮಹಿಳಾ ಕಾರ್ಮಿಕರು ಮೃತಪಟ್ಟ ಘಟನೆ ನಗರದಲ್ಲಿ ಬುಧವಾರ ಸಂಭವಿಸಿದೆ.
ಹಾಸನದ ಬೇಲೂರು ಸಮೀಪವಿರುವ ಯಲಹಂಕದ ನಿವಾಸಿ ಗೌರಮ್ಮ (45) ಹಾಗೂ ಚಿಕ್ಕಮಗಳೂರು ಮಾದೇರಹಳ್ಳಿ ನಿವಾಸಿ ಯಶೋದಾ (22) ಮೃತಪಟ್ಟವರು.
ಮಡಿಕೇರಿ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪಿ. ರಮೇಶ್ ಅವರ ಮನೆಯ ಮುಂಭಾಗದಲ್ಲಿ ತಡೆಗೋಡೆಗಾಗಿ ಮಣ್ಣು ತೆಗೆಯುತ್ತಿದ್ದಾಗ ಏಕಾಏಕಿ ಬರೆ ಕುಸಿಯಿತು. ಗೌರಮ್ಮ ಅವರ ಪತಿ ಮಾಷ ಬೋವಿ ಗಂಭೀರವಾಗಿ ಗಾಯಗೊಂಡಿದ್ದು, ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಒಟ್ಟು 6 ಮಂದಿ ಕಾರ್ಮಿಕರು ತಡೆಗೋಡೆ ಕಾಮಗಾರಿಗೆ ಪಾಯ ತೋಡುತ್ತಿದ್ದರು. ಆಗ ಸುಮಾರು 20 ಅಡಿ ಎತ್ತರದ ಬರೆ ಜರಿದು ಬಿದ್ದಿದ್ದು, ಐವರು ಮಣ್ಣಿನಡಿ ಸಿಲುಕಿದರು. ಸವಿತಾ ಹಾಗೂ ಹೊನ್ನ ಬೋವಿ ಎಂಬ ಕಾರ್ಮಿಕರು ತತ್‌ಕ್ಷಣ ಮಣ್ಣಿನಡಿಯಿಂದ ಹೊರಬಂದು ಪ್ರಾಣ ಉಳಿಸಿಕೊಂಡರು. ಮಣ್ಣಿನಡಿ ಸಿಲುಕಿ ಗಾಯಗೊಂಡಿದ್ದ ಮತ್ತೋರ್ವ ಕಾರ್ಮಿಕ ನಂಜುಂಡ ಅವರನ್ನು ಇತರ ಕಾರ್ಮಿಕರು ಹೊರ ತೆಗೆಯುವಲ್ಲಿ ಸಫಲರಾಗಿದ್ದಾರೆ. ಆದರೆ ಮಾಷ ಬೋವಿ, ಯಶೋದಾ ಮತ್ತು ಗೌರಮ್ಮ ಅವರನ್ನು ಮೇಲೆತ್ತಲು ಸಾಧ್ಯವಾಗಲಿಲ್ಲ.
ಮಾಹಿತಿ ಪಡೆದ ಮಡಿಕೇರಿ ನಗರ ಪೊಲೀಸರು ಸಾರ್ವಜನಿಕರ ಸಹಾಯದೊಂದಿಗೆ ಮಣ್ಣಿನಡಿ ಸಿಲುಕಿದ್ದವರನ್ನು ರಕ್ಷಿಸಲು ಮುಂದಾದರು. ಅರ್ಧ ಗಂಟೆಗೂ ಹೆಚ್ಚು ಕಾಲ ರಕ್ಷಣಾ ಕಾರ್ಯಾಚರಣೆಯ ಬಳಿಕ ಗಂಭೀರ ಗಾಯಗೊಂಡ ಸ್ಥಿತಿ ಯಲ್ಲಿದ್ದ ಮಾಷ ಬೋವಿಯನ್ನು ಹೊರತೆಗೆದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಯಶೋದಾ ಮತ್ತು ಗೌರಮ್ಮ ಅವರ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಯಿತು. ಸ್ವಲ್ಪ ಸಮಯದ ಬಳಿಕ ಇಬ್ಬರನ್ನು ಮಣ್ಣಿನಡಿಯಿಂದ ಹೊರತೆಗೆದು ತುರ್ತು ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರಲ್ಲಿ ಅವರಿಬ್ಬರೂ ಮೃತಪಟ್ಟಿದ್ದರು.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸುಮನಾ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ನಗರಸಭಾ ಪೌರಾಯುಕ್ತ ರಮೇಶ್ ಆಗಮಿಸಿ ಪರಿಶೀಲನೆ ನಡೆಸಿದರು. ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಠಾಣಾಧಿಕಾರಿ ಷಣ್ಮುಗ ನೇತೃತ್ವದಲ್ಲಿ ಅಗ್ನಿ ಶಾಮಕ ದಳ ಮತ್ತು ಸಾರ್ವಜನಿಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.