Advertisement

Madikeri; ಕಾಡಿನ ಜೀವ ಕೆ.ಎಂ. ಚಿಣ್ಣಪ್ಪ ಇನ್ನಿಲ್ಲ

12:33 AM Feb 27, 2024 | Team Udayavani |

ಮಡಿಕೇರಿ: ಹಿರಿಯ ಪರಿಸರ ಪ್ರೇಮಿ, ವನ್ಯಜೀವಿ ತಜ್ಞ, ನಿವೃತ್ತ ಅರಣ್ಯಾಧಿಕಾರಿ ಕೊಟ್ರಂಗಡ ಎಂ. ಚಿಣ್ಣಪ್ಪ (84) ಸೋಮವಾರ ನಿಧನ ಹೊಂದಿದರು.

Advertisement

ಪೊನ್ನಂಪೇಟೆ ತಾಲೂಕಿನ ಕಾಕೂರು ಗ್ರಾಮದ ನಿವಾಸಿಯಾಗಿದ್ದ ಚಿಣ್ಣಪ್ಪ, 30 ವರ್ಷಗಳ ಕಾಲ ಅರಣ್ಯ ಇಲಾಖೆಯಲ್ಲಿ ರೇಂಜರ್‌ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಸೇವಾ ಅವಧಿಯಲ್ಲಿ ರಾಜ್ಯದ ಹಲವು ಅರಣ್ಯ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು ವನ್ಯ ಸಂಪತ್ತು ಲೂಟಿ, ಕಳ್ಳ ಬೇಟೆ, ಮರ ಕಳ್ಳತನ ಮತ್ತಿತರ ಅಕ್ರಮಗಳಿಗೆ ಶಾಶ್ವತ ಕಡಿವಾಣ ಹಾಕಿದ್ದರು.

1990ರ ದಶಕದಲ್ಲಿ ನಾಗರಹೊಳೆ ಅಭಯಾರಣ್ಯಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದಾಗ ಜೀವದ ಹಂಗನ್ನೇ ತೊರೆದು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದರು. ಅವರು ಅರಣ್ಯ ಅಧಿಕಾರಿಯಾಗಿ ಸಲ್ಲಿಸಿದ ಸೇವೆಯ ಕುರಿತು ಲೇಖಕ ಗೋಪಾಲ್‌ ಅವರು “ಕಾಡಿನೊಳಗೊಂದು ಜೀವ’ ಎಂಬ ಕೃತಿಯನ್ನು ರಚಿಸಿದ್ದು, ಅದು ಅಪಾರ ಜನ ಮೆಚ್ಚುಗೆ ಗಳಿಸಿದೆ.

ಚಿಣ್ಣಪ್ಪ ಅವರು ವನ್ಯಜೀವಿ ಸಂರಕ್ಷಣ ರ್ಯಾಲಿ ಮತ್ತು ಸಂವಾದಗಳೊಂದಿಗೆ 1.50 ಲಕ್ಷಕ್ಕೂ ಹೆಚ್ಚು ಶಾಲಾ ಮಕ್ಕಳು, ಶಿಕ್ಷಕರು, ಗ್ರಾಮೀಣ ಯುವಕರು ಹಾಗೂ ಗ್ರಾಮಸ್ಥರನ್ನು ತಲುಪಿದ್ದಾರೆ. ನಿವೃತ್ತಿಯ ಬಳಿಕವೂ 2,500ಕ್ಕೂ ಹೆಚ್ಚು ಅರಣ್ಯ ಸಂರಕ್ಷಣ ಸಿಬಂದಿಗೆ ಕಳ್ಳಬೇಟೆ ತಡೆ ಕಾರ್ಯಾಚರಣೆ ಮತ್ತು ಅಗ್ನಿಶಾಮಕ ರಕ್ಷಣೆಯಲ್ಲಿ ತರಬೇತಿ ನೀಡಿದರು.

Advertisement

ಕೊಟ್ರಂಗಡ ಚಿಣ್ಣಪ್ಪ ಅವರು ಕೂರ್ಗ್‌ ವೈಲ್ಡ್‌ಲೈಫ್ ಫ‌ಸ್ಟ್‌ ಸಂಘಟನೆ ಹುಟ್ಟುಹಾಕಿ ಪರಿಸರ ಸಂರಕ್ಷಣೆಗೆ ತಮ್ಮದೇ ಆದ ಸೇವೆ ಮತ್ತು ಕೊಡುಗೆ ನೀಡಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಶಾಲಾ ಮಕ್ಕಳಿಂದ ಕಾಳಿYಚ್ಚು ಜಾಗೃತಿ ಜಾಥಾ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಣ್ಯ ಸಂರಕ್ಷಣೆಯ ಅರಿವು ಮೂಡಿಸುತ್ತಿದ್ದರು.

1941ರಲ್ಲಿ ಜನಿಸಿದ ಚಿಣ್ಣಪ್ಪ 1967ರಲ್ಲಿ ಅರಣ್ಯ ಸೇವೆಗೆ ಸೇರಿದರು. 1992ರಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದೊಡ್ಡ ಕಾಳಿYಚ್ಚು ಸಂಭವಿಸಿದ ಅನಂತರ ಸ್ವಯಂಪ್ರೇರಿತರಾಗಿ ಸೇವೆಯಿಂದ ನಿವೃತ್ತರಾದರು.

ಪ್ರಶಸ್ತಿಗಳು
ಚಿಣ್ಣಪ್ಪ ಅವರ ಅಮೋಘ ಸೇವೆಯನ್ನು ಪರಿಗಣಿಸಿ ಸರಕಾರ 1985ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿತ್ತು. 1988ರಲ್ಲಿ ಡಬ್ಲ್ಯುಸಿಎಸ್‌ ಪ್ರಶಂಸಾ ಪತ್ರ ಮತ್ತು 1996ರಲ್ಲಿ ಟೈಗರ್‌ ಲಿಂಕ್‌ ಬಾಗ್‌ ಸೇವಕ್‌ ಪ್ರಶಸ್ತಿ ನೀಡಲಾಗಿದೆ. 2000 ಮತ್ತು 2006ರಲ್ಲಿ ಕ್ರಮವಾಗಿ ಇಎಸ್‌ಎಸ್‌ಒ ಮತ್ತು ಅಭಯಾರಣ್ಯದ ಜೀವಮಾನದ ಸಾಧನೆ ಪ್ರಶಸ್ತಿ, 2009ರಲ್ಲಿ ಸಿಎನ್‌ಎನ್‌-ಐಬಿಎನ್‌ ರಿಯಲ್‌ ಹೀರೋಸ್‌ ಪ್ರಶಸ್ತಿ ಲಭಿಸಿದೆ.

ಇಂದು ಅಂತ್ಯಕ್ರಿಯೆ
ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಮಂಗಳವಾರ ಸ್ವಗ್ರಾಮದಲ್ಲಿ ನಡೆಯಲಿದೆ.

ಸಂತಾಪ
ವನ್ಯಜೀವಿ ಸಂರಕ್ಷಣೆ ಕಾಯಿದೆಯನ್ನು ಅನುಷ್ಠಾನಗೊಳಿಸಿ ಅವುಗಳ ಉಳಿವಿಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಕೊಟ್ರಂಗಡ ಎಂ. ಚಿಣ್ಣಪ್ಪ ಅವರ ಅಗಲಿಕೆಗೆ ಪರಿಸರ ಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ. ವಿವಿಧ ಸಂಘ – ಸಂಸ್ಥೆಗಳು ಕೂಡ ಕಂಬನಿ ಮಿಡಿದಿವೆ. ಈ ಕುರಿತು ಪ್ರತಿಕ್ರಿಯಿಸಿದ ವೈಲ್ಡ್‌ಲೈಫ್ ಫ‌ಸ್ಟ್‌ ಸಹ ಸಂಸ್ಥಾಪಕ ಪ್ರವೀಣ್‌ ಭಾರ್ಗವ್‌, ವನ್ಯಜೀವಿಗಳ ಸಂರಕ್ಷಣೆ ಕುರಿತು ಅರಿವು ಮೂಡಿಸಿದ್ದ ಚಿಣ್ಣಪ್ಪ ನನಗೆ ಗುರುಗಳಾಗಿದ್ದರು ಎಂದು ಸ್ಮರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next