ಮಡಿಕೇರಿ: ಕಾಲೂರು ಗ್ರಾಮದಲ್ಲಿ ಸಂಭವಿಸಿದ ಭೂ ಕುಸಿತ ಮತ್ತು ಮಹಾಮಳೆಯಲ್ಲಿ 7 ವರ್ಷದ ಬಾಲಕ ನಾಪತ್ತೆಯಾಗಿದ್ದಾನೆಂದು ದೂರು ನೀಡಿದ್ದ ದಂಪತಿಗಳ ವಂಚನೆಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಯಲಿಗೆಳೆದಿದ್ದಾರೆ.
ಜಿಲ್ಲೆಯಲ್ಲಿ ಸುರಿದ ಮಹಾಮಳೆಯಿಂದ ಕಾಲೂರು ಭಾಗದಲ್ಲೂ ಬೆಟ್ಟ ಕುಸಿದು ಗ್ರಾಮಸ್ಥರು ಜೀವಭಯದಿಂದ ಊರು ತೊರೆದಿದ್ದರು. ಈ ಸಂದರ್ಭ ಸೋಮಶೇಖರ್, ಸುಮಾ ದಂಪತಿಗಳು ಭೂ ಕುಸಿತದಿಂದ ತನ್ನ 7 ವರ್ಷದ ಮಗ ಗಗನ್ ಗಣಪತಿ ಕಣ್ಣ ಮುಂದೆಯೇ ಮಣ್ಣಿನಡಿ ಸಿಲುಕಿಕೊಂಡ ಎಂದು ಮರುಕ ಗಿಟ್ಟಿಸಿಕೊಂಡು ಮಡಿಕೇರಿಯ ಮೈತ್ರಿ ಹಾಲ್‌ನ ನಿರಾಶ್ರಿತರ ಶಿಬಿರ ಸೇರಿಕೊಂಡಿದ್ದರು.
ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಕಳೆದ ನಾಲ್ಕು ದಿನಗಳಿಂದ ಭೂಕುಸಿತದ ಸ್ಥಳದಲ್ಲಿ ಬಾಲಕನ ಪತ್ತೆಗಾಗಿ ನಿರಂತರ ಶೋಧಕಾರ್ಯ ಕೈಗೊಂಡಿದ್ದರು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳದೊಂದಿಗೆ ಗ್ರಾಮಾಂತರ ಪೊಲೀಸರು ಕೂಡಾ ಕಾರ್ಯಾಚರಣೆ ನಡೆಸಿದ್ದರು, ಆದರೆ ಬಾಲಕ ಪತ್ತೆಯಾಗಿರಲಿಲ್ಲ.
ಬಾಲಕ ಮಣ್ಣಿನಡಿ ಸಿಲುಕಿರುವ ಸ್ಥಳ ಗುರುತಿಸುವಂತೆ ದಂಪತಿಗಳಿಗೆ ಸೂಚಿಸಿದಾಗ ಗೊಂದಲದಲ್ಲೇ ಉತ್ತರಿಸಿದ್ದರು. ಇದರಿಂದ ಸಂಶಯಗೊಂಡ ಪೊಲೀಸರು ದಂಪತಿಯನ್ನು ವಿಚಾರಣೆ ನಡೆಸಿದಾಗ ತೋಟದ ಮಾಲೀಕರೋರ್ವರು ತಮಗೆ ಈ ರೀತಿಯಾಗಿ ಹೇಳುವಂತೆ ತಿಳಿಸಿದ್ದರು. ಹೀಗಾಗಿ ನಾವು ಮಗು ನಾಪತ್ತೆಯಾಗಿದೆ ಎಂದು ದೂರು ನೀಡಿದ್ದೇವೆಂದು ಬಾಯಿ ಬಿಟ್ಟಿದ್ದಾರೆ. ಸೋಮಶೇಖರ್ ಮತ್ತು ಸುಮಾ ಇಬ್ಬರದ್ದು ಕೂಡಾ ಎರಡನೇ ವಿವಾಹವಾಗಿದ್ದು, ಇಬ್ಬರೂ ತಮ್ಮ ಮೊದಲನೇ ಮಕ್ಕಳನ್ನು ತೊರೆದಿದ್ದಾರೆ. ನಾಪತ್ತೆಯಾಗಿದ್ದಾನೆಂದು ಹೇಳಲಾಗಿದ್ದ ಬಾಲಕ ಸುಮಾ ಅವರ ತಾಯಿಯ ಮನೆ ತಿತಿಮತಿಯಲ್ಲಿ ಸುರಕ್ಷಿತವಾಗಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ದಂಪತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ದೊರೆಯುತ್ತದೆ ಎನ್ನುವ ಕಾರಣಕ್ಕಾಗಿ ಈ ಡ್ರಾಮಾ ನಡೆದಿದೆ ಎಂದು ಹೇಳಲಾಗಿದೆ.