Advertisement

ಪ. ಪಂ. ಚುನಾವಣೆ: ಜಿಲ್ಲಾಡಳಿತದಿಂದ ಅಂತಿಮ ಹಂತದ ಸಿದ್ಧತೆ  

10:30 PM Oct 26, 2018 | |

 ಮಡಿಕೇರಿ: ಕೊಡಗಿನ ಮೂರು ಪಟ್ಟಣ ಪಂಚಾಯತ್‌ಗಳಿಗೆ ಅ.28ರಂದು ಮತದಾನ ನಡೆಯಲಿದ್ದು, ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ. 

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು ಸೋಮವಾರಪೇಟೆ ಪ.ಪಂ. 11 ಮತಗಟ್ಟೆಗಳಿಗೆ, ಕುಶಾಲನಗರ 16 ಮತಗಟ್ಟೆಗಳಲ್ಲಿ, ವಿರಾಜಪೇಟೆಯ 18 ಮತಗಟ್ಟೆ ಒಟ್ಟು 45 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. 

ಕುಶಾಲನಗರ ಪಟ್ಟಣ ಪಂಚಾಯತ್‌ ಸಂಬಂಧಿಸಿದಂತೆ ಕಾಂಗ್ರೆಸ್‌ನಿಂದ 16, ಬಿ.ಜೆ.ಪಿ, 16, ಜೆ.ಡಿ.ಎಸ್‌.16, ಎಸ್‌.ಡಿ.ಪಿ.ಐ 2, ಪಕ್ಷೇತರರು 14 ಒಟ್ಟು 64 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಸೋಮವಾರಪೇಟೆ ಪ.ಪಂ.ಯಲ್ಲಿ ಕಾಂಗ್ರೆಸ್‌ನ 6, ಬಿ.ಜೆ.ಪಿಯ 11, ಜೆ.ಡಿ.ಎಸ್‌.ನ 5 ಪಕ್ಷೇತರರು 4 ಒಟ್ಟು 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಿರಾಜಪೇಟೆ ಪ.ಪಂ.ಯಲ್ಲಿ ಕಾಂಗ್ರೆಸ್‌ ನ 14, ಬಿ.ಜೆ.ಪಿ.ಯ18, ಜೆ.ಡಿ.ಎಸ್‌.ನ 4, ಎನ್‌.ಸಿ.ಪಿ.ಯ1, ಎಸ್‌.ಡಿ.ಪಿ.ಐ,ಯ 2, ಡಬ್ಲೂ.ಪಿ.ಐ. ಯ2, ಪಕ್ಷೇತರರು 14 ಒಟ್ಟು 55 ಮಂದಿ ಕಣದಲ್ಲಿದ್ದಾರೆ. 
ಅತೀ ಸೂಕ್ಷ್ಮ, ಸೂಕ್ಷ್ಮ ಮತ್ತು ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಸೋಮವಾರಪೇಟೆ ಪ.ಪಂ.ಯಲ್ಲಿ 3 ಸೂಕ್ಷ್ಮ, 2 ಅತೀ ಸೂಕ್ಷ್ಮ, 6 ಸಾಮಾನ್ಯ ಮತಗಟ್ಟೆಗಳು, ಕುಶಾಲನಗರ ಪಟ್ಟಣ ಪಂಚಾಯಿತಿಯಲ್ಲಿ 4 ಸೂಕ್ಷ್ಮ, 3 ಅತೀಸೂಕ್ಷ್ಮ, 9 ಸಾಮಾನ್ಯ ಮತಗಟ್ಟೆಗಳು, ವಿರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ 3 ಸೂಕ್ಷ್ಮ, 2 ಅತೀಸೂಕ್ಷ್ಮ, 13 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಒಟ್ಟಾರೆ 45 ಮತಗಟ್ಟೆಗಳಲ್ಲಿ 10 ಸೂಕ್ಷ್ಮ, 7 ಅತೀ ಸೂಕ್ಷ್ಮ ಮತ್ತು 28 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. 

ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ವಿರಾಜಪೇಟೆ ತಾಲ್ಲೂಕಿಗೆ 9 ಜೀಪು, 1 ಮಿನಿ ಬಸ್ಸು, ಸೋಮವಾರಪೇಟೆ ತಾಲ್ಲೂಕಿಗೆ 10 ಜೀಪು, 3 ಮಿನಿ ಬಸ್ಸು ನಿಯೋಜಿಸಲಾಗಿದೆ ಎಂದರು. ಅ.  27ರಂದು ಬೆಳಗ್ಗೆ 9 ಗಂಟೆಯಿಂದ ಸೋಮವಾರಪೇಟೆ ಹಾಗೂ ಕುಶಾಲನಗರ ಪಟ್ಟಣ ಪಂಚಾಯತ್‌ಗಳಿಗೆ ಸಂಬಂಧಿಸಿದಂತೆ ಮಸ್ಟರಿಂಗ್‌ ಕಾರ್ಯ ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ವಿರಾಜಪೇಟೆ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ ಮಸ್ಟರಿಂಗ್‌ ಕಾರ್ಯ ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಅ. 28 ರಂದು ಮತದಾನ ಪೂರ್ಣಗೊಂಡ ಅನಂತರ ಡಿ ಮಸ್ಟರಿಂಗ್‌ ಕಾರ್ಯವು ಸೋಮವಾರಪೇಟೆ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿ–ತ್‌ಗಳಿಗೆ ಸಂಬಂಧಿಸಿದಂತೆ ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತ್ತು ವಿರಾಜಪೇಟೆ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಜಿಲ್ಲೆಯ ಕುಶಾಲನಗರ, ಸೋಮವಾರ ಪೇಟೆ ಮತ್ತು ವಿರಾಜಪೇಟೆ ಪಟ್ಟಣ ಪಂಚಾಯತ್‌ಗಳಿಗೆ ವೇಳಾಪಟ್ಟಿಯಂತೆ ಅ.  28 ರಂದು ಮತದಾನ ನಡೆಯಲಿದ್ದು, ಪಟ್ಟಣ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿರುವುದರಿಂದ ಮತದಾನದ ದಿನದಂದು ಮತದಾನ ಪ್ರಾರಂಭವಾಗುವ ಮುಂಚಿನ 48 ಗಂಟೆಗಳ ಮುಂಚೆ ಅಕ್ಟೋಬರ್‌, 26ರ ಬೆಳಗ್ಗೆ 7 ಗಂಟೆಯ ನಂತರ ರಾಜಕೀಯ ಪಕ್ಷಗಳು, ಚುನಾವಣೆಗೆ ಸ್ಪರ್ಧಿಸಿರುವ  ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪರವಾಗಿ ಯಾರೇ ಇತರರು ಯಾವುದೇ ವಿಧದಲ್ಲಿ ಬಹಿರಂಗ ಚುನಾವಣಾ ಪ್ರಚಾರವನ್ನು ನಡೆಸತಕ್ಕದ್ದಲ್ಲ.

Advertisement

ಅ. 26 ರ ಬೆಳಗ್ಗೆ 7 ಗಂಟೆಯ ಒಳಗೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಬೆಂಬಲಕ್ಕಾಗಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಹೊರಗಿನಿಂದ ಚುನಾವಣಾ ಪ್ರಚಾರಕ್ಕಾಗಿ ತಾರಾ ಪ್ರಚಾರಕರು ಮತ್ತು ಇತರೆ ವ್ಯಕ್ತಿಗಳನ್ನು ಕರೆಯಿಸಿಕೊಂಡಿದ್ದಲ್ಲಿ ಅಂತಹ ವ್ಯಕ್ತಿಗಳು ಚುನಾವಣೆ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯನ್ನು ಕಡ್ಡಾಯವಾಗಿ ಬಿಡುವುದು. ಅ. 26ರ ಬೆಳಗ್ಗೆ 7 ಗಂಟೆಯ ಒಳಗೆ ಮತದಾರರಲ್ಲದ ಬೆಂಬಲಿಗರು, ರಾಜಕೀಯ ಪಕ್ಷದ ಪದಾಧಿಕಾರಿಗಳು, ಮುಖಂಡರುಗಳು, ಪಕ್ಷದ ಕಾರ್ಯಕರ್ತರು, ಮೆರವಣಿಗೆ ಕಾರ್ಯ ನಿರ್ವಹಿಸುವವರು, ಪ್ರಚಾರ ಕಾರ್ಯ ನಿರ್ವಹಿಸುವವರು ಇತರೆ ನಗರ ಸ್ಥಳೀಯ ಸಂಸ್ಥೆಯ ವಾರ್ಡ್‌ ವ್ಯಾಪ್ತಿಯಿಂದ ಕಡ್ಡಾಯವಾಗಿ ಹೊರಗೆ ಹೋಗುವುದು. 

ಚುನಾವಣಾ ಪ್ರಚಾರವು ಮತದಾನ ಪ್ರಾರಂಭವಾಗುವ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಹಾಗೂ ಚುನಾವಣೆ ನಡೆಯಲಿರುವ ದಿನಾಂಕದಂದು ಯಾವುದೇ ರಾಜಕೀಯ ಪಕ್ಷವಾಗಲೀ ಅಥವಾ ಅಭ್ಯರ್ಥಿಗಳಾಗಲೀ ಅಥವಾ ಅವರ ಪರವಾಗಿ ಬೆಂಗಲಿಗರಾಗಲೀ ಸಾರ್ವಜನಿಕ ಸಭೆ ಮತ್ತು ಸಮಾರಂಭ-ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿ ದಂತಹವುಗಳನ್ನು ಏರ್ಪಡಿಸತಕ್ಕದ್ದಲ್ಲ. ಮತದಾರರಿಗೆ ಮೊಬೈಲ್‌ ಮೂಲಕ ಎಸ್‌.ಎಂ.ಎಸ್‌. ಕಳುಹಿಸತಕ್ಕದ್ದಲ್ಲ. ಎಫ್.ಎಂ.ರೇಡಿಯೋ, ಟಿ.ವಿ.ಚಾನಲ್‌ ಮಾಧ್ಯಮಗಳ ಮೂಲಕ ಪ್ರಚಾರ ಮಾಡಬಾರದು. ಮತದಾರರಿಗೆ ವಿಡಿಯೋ ಕ್ಲಿಪ್ಪಿಂಗ್‌ ಪ್ರದರ್ಶಿಸಬಾರದು. 

ಯಾರೇ ವ್ಯಕ್ತಿಯು ಮತದಾನ ನಡೆಯುವ ದಿನಾಂಕಗಳಲ್ಲಿ ಆ ಮತದಾನ ಕೇಂದ್ರದೊಳಗೆ ಅಥವಾ ಮತದಾನ ಕೇಂದ್ರದಿಂದ ನೂರು ಮೀಟರ್‌ರೊಳಗೆ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಮತಗಳಿಗಾಗಿ ಪ್ರಚಾರ ಮಾಡುವುದು, ಯಾವನೇ ಮತದಾರನ ಮತವನ್ನು ಕೋರುವುದು, ನಿರ್ಧಿಷ್ಟ ಅಭ್ಯರ್ಥಿಗೆ ಮತ ನೀಡದಿರುವಂತೆ ಮತದಾರನನ್ನು ಮನ ಒಲಿಸುವುದು, ಚುನಾವಣೆಯಲ್ಲಿ ಮತ ನೀಡದಂತೆ ಯಾವನೇ ಮತದಾರನ್ನು ಮನ ಒಲಿಸುವುದು, ಚುನಾವಣೆಗೆ ಸಂಬಂಧಪಟ್ಟ ಯಾವುದೇ ಸೂಚನೆ ಅಥವಾ ಚಿಹ್ನೆಯನ್ನು ಪ್ರದರ್ಶಿಸಬಾರದು. ಉಲ್ಲಂ ಸುವ ವ್ಯಕ್ತಿಯು ಶಿಕ್ಷಾರ್ಹರಾಗುತ್ತಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದಾರೆ.

ಮದ್ಯ ಮಾರಾಟ ನಿಷೇಧ
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ-2018ರ ಮತದಾನವನ್ನು ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಅಕ್ಟೋಬರ್‌, 26ರ ಮಧ್ಯರಾತ್ರಿ 12 ಗಂಟೆಯಿಂದ ಅಕ್ಟೋಬರ್‌, 28ರ ಮಧ್ಯರಾತ್ರಿ 12 ಗಂಟೆಯವರೆಗೆ ಕೊಡಗು ಜಿಲ್ಲೆಯ ಕುಶಾಲನಗರ, ಸೋಮವಾರಪೇಟೆ ಮತ್ತು ವಿರಾಜಪೇಟೆ ಪಟ್ಟಣ ಪಂಚಾಯಥ್‌ ಗಳ ವ್ಯಾಪ್ತಿಯಲ್ಲಿ ಎಲ್ಲಾ ವಿಧದ ಮದ್ಯ ಸಾಗಾಣಿಕೆ, ಶೇಖರಣೆ ಮತ್ತು ಎಲ್ಲ  ರೀತಿಯ ಅಂಗಡಿ, ಬಾರ್‌ ಮತ್ತು ರೆಸ್ಟೋರೆಂಟ್‌, ಕ್ಲಬ್‌, ಹೋಟೆಲ್‌ ಮುಂತಾದವುಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ –ಆದೇಶ ಹೊರಡಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next