Advertisement

ಮಡಿಕೇರಿ: ಮಾ. 31ರ ವರೆಗೆ ಹಲವು ನಿರ್ಬಂಧ

02:24 AM Mar 23, 2020 | Sriram |

ಮಡಿಕೇರಿ: ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕಿತ ವ್ಯಕ್ತಿಯೋರ್ವ ಪತ್ತೆಯಾದ ಕಾರಣ ಮಾ. 31ರ ವರೆಗೆ ಹೆಚ್ಚಿನ ನಿಗಾ ವಹಿಸಲು ಸರಕಾರ ಆದೇಶಿಸಿರುವ ಹಿನ್ನೆಲೆ ಜಿಲ್ಲಾಡಳಿತ ಕೆಲವು ನಿರ್ಬಂಧಗಳನ್ನು ಹೇರಿದ್ದು, ಜನರು ಸ್ವಯಂ ಪ್ರೇರಿತರಾಗಿ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಮನವಿ ಮಾಡಿದ್ದಾರೆ. 

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗಿನ ಗಡಿ ಭಾಗವಾದ ಸಂಪಾಜೆ,ಶಿರಂಗಾಲ, ಮಾಕುಟ್ಟ ಚೆಕ್‌ ಪೋಸ್ಟ್‌ ನಲ್ಲಿ ವಾಹನಗಳ ಆಗಮನ ಮತ್ತು ನಿರ್ಗಮ ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಸರಕಾರಿ, ಖಾಸಗಿ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮಾ. 31ರ ವರೆಗೆ ಜಿಲ್ಲೆಯಾದ್ಯಂತ ಎಲ್ಲ ರೀತಿಯ ಆಹಾರ, ದಿನಸಿ, ತರಕಾರಿ, ಹಣ್ಣು, ಮೀನು ಅಂಗಡಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಂಗಡಿಗಳು ತೆರೆಯುವಂತಿಲ್ಲ. ಶಾಪಿಂಗ್‌ ಮಾಲ್‌, ಸೂಪರ್‌ ಮಾರ್ಕೆಟ್‌ಗಳೂ ಸೇರಿದಂತೆ ವಾಣಿಜ್ಯ ಉದ್ದೇಶದ ಅಂಗಡಿಗಳು ಬಂದ್‌ ಮಾಡಲೇಬೇಕು. ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ಅಂತರ ರಾಜ್ಯ ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಆದರೆ ಎಲ್ಲ ಗೂಡ್ಸ್‌ ವಾಹನಗಳ ಸಂಚಾರಕ್ಕೆ ಅನುಮತಿಯಿದೆ. ಬ್ಯಾಂಕ್‌, ಸರಕಾರಿ, ಆ್ಯಂಬುಲೆನ್ಸ್‌, ಪೊಲೀಸ್‌, ಮಾಧ್ಯಮ, ಕುಡಿಯುವ ನೀರು, ಹಾಲು, ವಿದ್ಯುತ್‌, ದೂರವಾಣಿ ಸೇವೆಗಳಿಗೆ ನಿರ್ಬಂಧವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ನಾಲ್ವರಲ್ಲಿ ನೆಗೆಟಿವ್‌
ವಿದೇಶದಿಂದ ಬಂದು ಸೋಂಕು ಶಂಕೆ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖ ಲಾಗಿದ್ದ ನಾಲ್ವರ ವೈದ್ಯಕೀಯ ವರದಿ ನೆಗೆಟಿವ್‌ ಎಂದು ದೃಢಪಡಿಸಿದ್ದು, ಅವರನ್ನು ಐಸೋಲೇಶನ್‌ ವಾರ್ಡ್‌ನಿಂದ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

75 ಮಂದಿಯ ನೇರ ಸಂಪರ್ಕ
ಕೊಡಗು ಜಿಲ್ಲೆಯಲ್ಲಿ 247 ಜನರು ವಿದೇಶಗಳಿಂದ ಜಿಲ್ಲೆಗೆ ಮರಳಿದ್ದಾರೆ. ಈಗಾಗಲೇ ಪಾಸಿಟಿವ್‌ ವರದಿ ಬಂದ 35 ವರ್ಷದ ವ್ಯಕ್ತಿ 75 ಜನರಿಗೆ ನೇರ ಸಂಪರ್ಕ ಹೊಂದಿದ್ದಾರೆ. ಈ 75 ಮಂದಿಗೂ ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಸೋಮವಾರ ಇವರೆಲ್ಲರ ಗಂಟಲ ದ್ರವ ಮತ್ತು ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ ಎಂದು ವಿವರಿಸಿದರು.

Advertisement

ವಿಶೇಷ ಹೋಂ ಕ್ವಾರಂಟೈನ್‌
ನಾಲ್ಕು ದಿನಗಳ ಹಿಂದೆ ಸೌದಿ ಅರೇಬಿಯಾದಿಂದ ಬಂದಿದ್ದ ದಂಪತಿಯ ವರದಿಯೂ ನೆಗೆಟಿವ್‌ ಬಂದಿದೆ. ಇದೀಗ ಆಸ್ಪತ್ರೆಯಲ್ಲಿ ದಾಖಲಾಗಿರುವ ಇನ್ನೂ ನಾಲ್ವರ ವರದಿಗಾಗಿ ಕಾಯಲಾಗುತ್ತಿದೆ. ಸೋಮವಾರ ಇವರೆಲ್ಲರ ವರದಿ ನಿರೀಕ್ಷಿಸಲಾಗಿದೆ. ಹೋಂ ಕ್ವಾರಂಟೈನ್‌ ಮಾಡಿರುವವರು ಹೊರಗೆ ಬಂದಲ್ಲಿ ಅವರನ್ನು ವಿಶೇಷ ಹೋಂ ಕ್ವಾರಂಟೈನ್‌ಗೆ ಹಾಕಲಾಗುವುದು. ಜಿಲ್ಲಾ ಕೇಂದ್ರದಲ್ಲಿ ವಿಶೇಷ ಹೋಂ ಕ್ವಾರಂಟೈನ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next