Advertisement

ಮಡಿಕೇರಿ: ಲಂಚಕ್ಕೆ ಬೇಡಿಕೆ ಇಟ್ಟ ಸರ್ವೇಯರ್‌ ಲೋಕಾಯುಕ್ತ ಬಲೆಗೆ

10:53 PM Jan 24, 2023 | Team Udayavani |

ಮಡಿಕೇರಿ: ವ್ಯಕ್ತಿಯೊಬ್ಬರಿಂದ 2 ಸಾವಿರ ರೂ. ನಗದು ಮತ್ತು 1 ಬಾಟಲಿ ಮದ್ಯ ಸ್ವೀಕರಿಸುತ್ತಿದ್ದ ಮಡಿಕೇರಿ ಸರ್ವೇ ಇಲಾಖೆಯ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸರ್ವೇಯರ್‌ ಆಗಿರುವ ಮಾದಪ್ಪ ವಿಚಾರಣೆಗೊಳಪಟ್ಟಿರುವ ಆರೋಪಿ. 2 ಸಾವಿರ ನಗದು ಹಾಗೂ 1 ಮದ್ಯದ ಬಾಟಲಿಯನ್ನು ವಶಕ್ಕೆ ಪಡೆಯಲಾಗಿದ್ದು ತನಿಖೆ ಮುಂದುವರಿಸಲಾಗಿದೆ.

Advertisement

ಚೇರಂಬಾಣೆ ಬಾಡಗ ಗ್ರಾಮದ ವ್ಯಕ್ತಿಯೊಬ್ಬರು 2 ಸರ್ವೇ ನಂಬರ್‌ಗಳಲ್ಲಿ ಕಾಫಿ ತೋಟ ಹೊಂದಿದ್ದು, ಮನೆ ನಿರ್ಮಿಸುವ ಸಲುವಾಗಿ ನಿವೇಶನ ಮಾಡಲು ಮುಂದಾಗಿದ್ದರು. ಈ ಸ್ಥಳದಲ್ಲಿ 3 ಬೀಟೆ ಮರಗಳಿದ್ದು, ಅದನ್ನು ತೆರವು ಮಾಡುವುದು ಮತ್ತು ನಿವೇಶನವನ್ನಾಗಿ ಪರಿವರ್ತಿಸಲು ಸ್ಥಳದ ಸರ್ವೇ ನಡೆಸಬೇಕಿತ್ತು. ಈ ಹಿನ್ನೆಲೆಯಲ್ಲಿ ಕಳೆದ 6 ತಿಂಗಳ ಹಿಂದೆ ಮಡಿಕೇರಿ ಸರ್ವೇ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಮಾತ್ರವಲ್ಲದೇ ಸರ್ವೇಗಾಗಿ ಸರಕಾರ ನಿಗದಿಪಡಿಸಿದ್ದ ಶುಲ್ಕವನ್ನೂ ಪಾವತಿ ಮಾಡಿದ್ದರು.

ಈ ವೇಳೆ ಸರ್ವೇಯರ್‌ ಮಾದಪ್ಪ ಅವರು 10 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದು, ಜಾಗದ ಮಾಲಕರು 10 ಸಾವಿರ ರೂ. ನಗದು ನೀಡಿದ್ದರು. ಬಳಿಕವೂ ಕೆಲಸ ನಿಧಾನಗತಿಯಲ್ಲಿ ಸಾಗಿದ್ದು ಈ ವೇಳೆ ಸರ್ವೇಯರ್‌ ಮಾದಪ್ಪ ಅವರನ್ನು ಸಂಪರ್ಕಿಸಿದಾಗ ಹೆಚ್ಚುವರಿ 5 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದು, ಆ ಹಣವನ್ನೂ ನೀಡಲಾಗಿತ್ತು. ಹೀಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸವಾಗಿರಲಿಲ್ಲ. ಮಾತ್ರವಲ್ಲದೇ ಹೆಚ್ಚುವರಿ 2 ಸಾವಿರ ನಗದು ಮತ್ತು 1 ಮದ್ಯದ ಬಾಟಲಿ ನೀಡುವಂತೆ ಒತ್ತಾಯಿಸಿದ್ದರು. ಇದರಿಂದ ಮನನೊಂದ ಅರ್ಜಿದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದರು ಎಂದು ಆರೋಪಿಸಲಾಗಿದೆ.

ಅರ್ಜಿದಾರರಿಂದ ಆರೋಪಿ ಮಾದಪ್ಪ ಅವರು ಕೆಎಸ್ಸಾ ರ್ಟಿಸಿ ಬಸ್‌ ನಿಲ್ದಾಣದಲ್ಲಿ 2 ಸಾವಿರ ರೂ. ನಗದು ಮತ್ತು 1 ಮದ್ಯದ ಬಾಟಲಿಯನ್ನು ಪಡೆಯುತ್ತಿದ್ದ ಸಂದರ್ಭ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.

ಲೋಕಾಯುಕ್ತ ಎಸ್‌.ಪಿ. ಸುರೇಶ್‌ ಬಾಬು ಮಾರ್ಗದರ್ಶನದಲ್ಲಿ ಕೊಡಗು ಲೋಕಾಯುಕ್ತ ಡಿವೈಎಸ್‌ಪಿ ಪವನ್‌ ಕುಮಾರ್‌, ವೃತ್ತನಿರೀಕ್ಷಕ ಲೋಕೇಶ್‌ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next