ಮಡಿಕೇರಿ: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು ಹಾರಿಸಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ವಿರಾಜಪೇಟೆಯ ಚೆಂಬೆಬೆಳ್ಳೂರು ಗ್ರಾಮದಲ್ಲಿ ಸಂಭವಿಸಿದೆ.
ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಪಣಿಎರವರ ಪೊನ್ನು (21) ಮೃತ ಕಾರ್ಮಿಕ. ಗುಂಡು ಹೊಡೆದ ಆರೋಪದಡಿ ವಿರಾಜಪೇಟೆಯ ಬ್ಯಾಂಕೊಂದರ ಭದ್ರತಾ ಸಿಬಂದಿ ಪೊರ್ಕಂಡ ಚಿಣ್ಣಪ್ಪ ಎಂಬಾತನನ್ನು ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕೋವಿಯನ್ನು ಬಂಧಿತನಿಂದ ವಶಪಡಿಸಿಕೊಳ್ಳಲಾಗಿದೆ.
ಕಾರ್ಮಿಕ ದಂಪತಿ ಪಣಿಎರವರ ಪೊನ್ನು ಹಾಗೂ ಗೀತಾ ಕೆಲವು ತಿಂಗಳ ಹಿಂದೆ ಚೆಂಬೆಬೆಳ್ಳೂರು ಗ್ರಾಮದ ತೋಟದ ಮಾಲಕರೊಬ್ಬರ ಲೈನ್ ಮನೆಗೆ ಬಂದು ನೆಲೆಸಿದ್ದರು. ಡಿ.27 ರಂದು ಸಂಜೆ ಪೊನ್ನು, ಆರೋಪಿ ಚಿಣ್ಣಪ್ಪ ಅವರ ತೋಟದ ಅಂಚಿನಲ್ಲಿದ್ದ ಹಲಸಿನ ಮರದಿಂದ ಮಿಡಿ ಕೊಯ್ಯಲು ಮುಂದಾಗಿದ್ದರು. ಇದೇ ಸಂದರ್ಭ ಸ್ಥಳಕ್ಕೆ ಬಂದ ಚಿಣ್ಣಪ್ಪ ಪೊನ್ನುವನ್ನು ನಿಂದಿಸಿ ಗುಂಡು ಹಾರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಗುಂಡೇಟಿನಿಂದ ಗಾಯಗೊಂಡು ಕೆಳಗೆ ಬಿದ್ದ ಪೊನ್ನುವನ್ನು ತೋಟದ ಮಾಲಕರ ನೆರವಿನಿಂದ ಪತ್ನಿ ಗೀತಾ ಅವರು ವಿರಾಜಪೇಟೆ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.