ಮಡಿಕೇರಿ: ದೇಶಕ್ಕಾಗಿ ಹುತಾತ್ಮರಾಗಿ ತ್ರಿವರ್ಣ ಧ್ವಜವನ್ನು ಹೊದ್ದು ಬಂದ ಕ್ಯಾಪ್ಟನ್ ಪ್ರಾಂಜಲ್ ಅವರಂತಹ ಸಾವಿರಾರು ವೀರರ ಬಲಿದಾನದಿಂದಾಗಿ ಭಾರತೀಯ ರಾದ ನಾವು ಇಂದು ಭಯವಿಲ್ಲದೆ ಬದುಕುತ್ತಿದ್ದೇವೆ, ಭಯವಿಲ್ಲದೆ ಭಾರತೀಯ ಸಂಸ್ಕೃತಿಯನ್ನು ಆಚರಿ ಸುತ್ತಿದ್ದೇವೆ ಎಂದು ಪತ್ರಕರ್ತ ಅಜಿತ್ ಹನುಮಕ್ಕನವರ್ ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವ ಹಿಂದೂ ಪರಿಷದ್ ವತಿಯಿಂದ ಭಾಗ ಮಂಡಲದ ತ್ರಿವೇಣಿ ಸಂಗಮ ದಲ್ಲಿ ನಡೆದ ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಕೊಡಗು ವೀರರ ನೆಲ, ಇಲ್ಲಿ ಪಾದಸ್ಪರ್ಷ ಮಾಡಿದಾಕ್ಷಣ ಮೈ ರೋಮಾಂಚನವಾಗುತ್ತದೆ. ದೇವಟ್ ಪರಂಬುವಿನಲ್ಲಿ ಆಕ್ರಂದನ ಕೇಳಿದಂತ್ತಾಗುತ್ತದೆ ಎಂದರು.
ತನ್ನದೇ ಆದ ಪಾವಿತ್ರ್ಯತೆಯನ್ನು ಹೊಂದಿರುವ ತಲಕಾವೇರಿ ಮತ್ತು ಭಾಗಮಂಡಲದ ಬಗ್ಗೆ ಹೊರಗಿನವರಿಗೆ ಅಪಾರ ಗೌರವವಿದೆ, ಇದು ಕೊಡಗಿನ ಹೆಮ್ಮೆ ಎಂದು ಅವರು ಬಣ್ಣಿಸಿದರು.
ವಿಶ್ವ ಹಿಂದು ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಅವರು ಮಾತನಾಡಿ ಪವಿತ್ರ ಕಾವೇರಿ ನದಿ, ಪ್ರಕೃತಿ, ಧಾರ್ಮಿಕತೆ ಮತ್ತು ಸಂಸ್ಕೃತಿಯ ಕುರಿತು ವಿವರಿಸಿದರು.
ಭಾಗಮಂಡಲದ ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಸಂಜೆ ನೂರಾರು ದೀಪಗಳು ಪ್ರಜ್ವಲಿಸಿದವು. ವೇದಘೋಷ, ಭಜನೆ, ಪ್ರಾರ್ಥನೆಯೊಂದಿಗೆ ಕಾವೇರಿ ತಾಯಿಗೆ ಶ್ರದ್ಧಾಭಕ್ತಿಯಿಂದ ಆರತಿ ಬೆಳಗಲಾಯಿತು.
ವಿಶ್ವ ಹಿಂದೂ ಪರಿಷತ್‌ನ ಪ್ರಮುಖ ಮುನಿಕೃಷ್ಣ, ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಸಂಘ ಪರಿವಾರದ ಪ್ರಮುಖರು, ಶ್ರೀ ಭಗಂಡೇಶ್ವರ ದೇವಾಲಯದ ಅರ್ಚಕರು, ಗ್ರಾಮಸ್ಥರು ಕಾವೇರಿ ಆರತಿಯಲ್ಲಿ ಪಾಲ್ಗೊಂಡಿದ್ದರು.