Advertisement

ಹಲವೆಡೆ ಸಂಪರ್ಕ ಕಡಿತ: ಜನಜೀವನ ಅಸ್ತವ್ಯಸ್ತ: ಕೊಡಗಿನಲ್ಲಿ ಆತಂಕ ಮೂಡಿಸಿರುವ ಮಹಾಮಳೆ

01:16 AM Jul 11, 2022 | Team Udayavani |

ಮಡಿಕೇರಿ: ಧಾರಾಕಾರ ಮಳೆೆಯಿಂದಾಗಿ ಕಾವೇರಿ ನದಿ ಒಳಗೊಂಡಂತೆ ಕಿರು ತೊರೆಗಳು ಉಕ್ಕಿ ಹರಿದು ಸೃಷ್ಟಿಯಾಗಿರುವ ಪ್ರವಾಹದಿಂದ ಹಲವೆಡೆ ಗ್ರಾಮೀಣ ರಸ್ತೆ ಸಂಪರ್ಕ ಕಡಿತಗೊಂಡಿವೆ. ಹಲವೆಡೆ ಮನೆಗಳು ಜಲಾವೃತಗೊಂಡಿವೆ. ಜಿಲ್ಲೆಯ ಬಹುತೇಕ ಕಡೆ ದರೆ ಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.

Advertisement

ಭಾಗಮಂಡಲದ ಸಂಗಮದಲ್ಲಿ ಕಾವೇರಿ ಉಕ್ಕಿ ಹರಿಯುತ್ತಿದ್ದು, ಮಡಿಕೇರಿ-ಭಾಗಮಂಡಲ ರಸ್ತೆಯ ಮೇಲೆ ಅಡಿಗಳಷ್ಟು ನೀರು ಹರಿಯುತ್ತಿದೆ. ಭಾಗಮಂಡಲ-ನಾಪೋಕ್ಲು ರಸ್ತೆ ಸಂಪೂರ್ಣ ಜಲಾವೃತವಾಗಿದೆ.

ಭಾಗಮಂಡಲ-ಕುದುಪಜೆ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ನದಿ ನೀರಿನ ರಭಸಕ್ಕೆ ಮೋರಿಯೊಂದು ಕೊಚ್ಚಿ ಹೋಗಿದೆ.

ಮನೆಗಳಿಗೆ ನುಗ್ಗಿದ ನೀರು
ಮಡಿಕೇರಿ ಮಂಗಳೂರು ರಸ್ತೆಯಲ್ಲಿ ಬರುವ ಕೊಯನಾಡು ಗ್ರಾಮದಲ್ಲಿ ಕಿಂಡಿ ಅನೆಕಟ್ಟು ತುಂಬಿ ತನ್ನ ಇಕ್ಕೆಲಗಳಲ್ಲಿ ಸೃಷ್ಟಿಸಿರುವ ಪ್ರವಾಹದಿಂದ ನಾಲ್ಕು ಮನೆಗಳು ಜಲಾವೃತವಾಗಿವೆ. ಅಣೆಕಟ್ಟಿಗೆ ಸಿಲುಕಿಕೊಂಡ ಮರದಿಂದಾಗಿ ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಸಿದೆ. ಮನೆ ಮಂದಿ ಮನೆ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿದ್ದಾರೆ.

ಮಡಿಕೇರಿ ತಾಲೂಕಿನ ಮುಕ್ಕೋಡ್ಲುವಿನಲ್ಲಿ ಕಿರು ಹೊಳೆ ಉಕ್ಕಿ ಹರಿಯುತ್ತಿದ್ದು, ಪ್ರವಾಹದ ನೀರಿನಿಂದ ಮುಕ್ಕೋಡ್ಲು ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ಮುಕ್ಕೋಡ್ಲು ಭದ್ರಕಾಳಿ ದೇವಸ್ಥಾನದ ತೂಗು ಸೇತುವೆಗೆ ಹಾನಿ ಸಂಭವಿಸಿದೆ. ಗಾಳಿಬೀಡು ಗಣಪರಿ ದೇವಸ್ಥಾನದ ಮುಂಭಾಗದ ರಸ್ತೆ ಜಲಾವೃತವಾಗಿದ್ದು, ಸಂಚಾರಕ್ಕೆ ಸಂಕಷ್ಟವನ್ನು ತಂದೊಡ್ಡಿದೆ.

Advertisement

ಬೊಳಿಬಾಣೆ ಸಂಪರ್ಕ ಕಡಿತ-ನಾಪೋಕ್ಲು -ಮೂರ್ನಾಡು ರಸ್ತೆಯ ಬೊಳಿಬಾಣೆಯಲ್ಲಿ ರಸ್ತೆ ಜಲಾವೃತವಾಗಿದ್ದು, ಸಂಪರ್ಕ ಕಡಿತವಾಗಿದೆ. ನಾಪೋಕ್ಲು, ಚೆರಿಯಪರಂಬು ಕಲ್ಲುಮೊಟ್ಟೆ ಸಂಪರ್ಕ ರಸ್ತೆಯಲ್ಲಿ ಕಾವೇರಿ ಪ್ರವಾಹ ರಸ್ತೆ ಸಂಪರ್ಕ ಸ್ಥಗಿತ.

ಶಾಲೆ ಹಿಂಭಾಗದ ಬರೆ ಕುಸಿತ
ಸಂಪಾಜೆ ಕೊಯನಾಡು ಸರಕಾರಿ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಭಾರೀ ಪ್ರಮಾಣದ ಬರೆ ಕುಸಿತವಾಗಿರುವ ಘಟನೆ ನಡೆದಿದೆ. ಇದೇ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದು ಕೆಲವು ಕುಟುಂಬಗಳಿಗೆ ಆಶ್ರಯ ಕಲ್ಪಿಸಲಾಗಿತ್ತು. ಇದೀಗ ಈ ಕುಟುಂಬಗಳನ್ನು ಕೊಯನಾಡು ಗಣಪತಿ ದೇವಾಲಯದ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ ಸೇರಿದಂತೆ ಎಲ್ಲ ಅಧಿಕಾರಿಗಳು ಸಂತ್ರಸ್ತರಿಗೆ ಧೈರ್ಯ ತುಂಬಿದರು.

ಮಂಗಳೂರು ರಸ್ತೆ ಮುಳುಗುವ ಭೀತಿ
ಮಳೆಯ ತೀವ್ರತೆ ಕಡಿಮೆ ಯಾಗದಿದ್ದಲ್ಲಿ ಕಿಂಡಿ ಅಣೆಕಟ್ಟೆಯಿಂದ ಉಂಟಾಗಿರುವ ಪ್ರವಾಹದಿಂದ ಮಡಿಕೇರಿ-ಮಂಗಳೂರು ರಸ್ತೆಯೂ ಮುಳುಗಡೆಯಾಗಿ ಪ್ರಮುಖ ಸಂಪರ್ಕ ಕಡಿತವಾಗುವ ಅಪಾಯ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next