Advertisement

Madikeri: ಅರೆಸುಟ್ಟ ಮೃತದೇಹದ ಪ್ರಕರಣ; ಪೊಲೀಸರಿಂದ ತಪ್ಪಿಸಿಕೊಂಡಿದ್ದ ಅಂಕೂರ್‌ ರಾಣ ಬಂಧನ

08:08 PM Nov 06, 2024 | Team Udayavani |

ಮಡಿಕೇರಿ: ಕೊಡಗು ಜಿಲ್ಲೆಯ ಸುಂಟಿಕೊಪ್ಪ ವ್ಯಾಪ್ತಿಯ ಕಾಫಿ ತೋಟವೊಂದರಲ್ಲಿ ದೊರೆತ ಅರೆಸುಟ್ಟ ಮೃತದೇಹದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪದಡಿ ತನಿಖೆ ಎದುರಿಸಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ ಹರಿಯಾಣ ರಾಜ್ಯದ ಕಾರ್ನಲ್‌ ಗರುಂದ ನಿವಾಸಿ ಅಂಕೂರ್‌ ರಾಣ(30) ಎಂಬಾತನನ್ನು ಕೊಡಗು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ತೆಲಾಂಗಣ ರಾಜ್ಯದಲ್ಲಿ ಸ್ಥಳ ಮಹಜರು ಮಾಡಲು ತೆರಳಿದ ಸಂದರ್ಭ ಮೂವರು ಆರೋಪಿಗಳಲ್ಲಿ ಅಂಕೂರ್‌ ರಾಣ ಪೊಲೀಸ್‌ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಹರಿಯಾಣ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಸತತ 6 ದಿನಗಳಿಂದ ಕಾರ್ಯಾಚರಣೆ ನಡೆಸಿ ರಾಜಸ್ಥಾನದ ಕೋಟಾ ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪತಿಯನ್ನೇ ಕೊಲೆ ಮಾಡಲು ಸಂಚು ರೂಪಿಸಿದ ತೆಲಂಗಾಣ ರಾಜ್ಯದ ಯಾದಾದ್ರಿ ಜಿಲ್ಲೆಯ ಮೋಂಗಿರ್‌ ನಗರದ ನಿಹಾರಿಕಾ ತನ್ನ ಸ್ನೇಹಿತ ಹರಿಯಾಣ ಮೂಲದ ಅಂಕೂರ್‌ ರಾಣನ ಸಹಾಯ ಪಡೆದಿದ್ದಾಳೆ. ಡ್ರಾಪ್‌ ಮಾಡುವ ನೆಪದಲ್ಲಿ ಪತಿ ರಮೇಶ್‌ ಕುಮಾರ್‌ ನ ಕಾರಿನಲ್ಲಿ ಬಂದ ಇಬ್ಬರು ಉಪ್ಪಳ್‌-ಭುವನಗಿರಿ ನಡುವಿನ ಹೆದ್ದಾರಿಯ ಬಳಿ ಕಾರನ್ನು ಬದಿಗೆ ನಿಲ್ಲಿಸಿದ್ದಾರೆ. ನಂತರ ಇಬ್ಬರು ಸೇರಿ ರಮೇಶ್‌ ಕುಮಾರ್‌ ನನ್ನು ಕೊಲೆ ಮಾಡಿದ್ದಾರೆ. ನಂತರ ಬೆಂಗಳೂರಿನ ಹೊರಮಾವು ಎಂಬಲ್ಲಿಗೆ ಬರುವ ನಿಹಾರಿಕಾ ತನ್ನ ಮತ್ತೂಬ್ಬ ಸ್ನೇಹಿತ ನಿಖೀಲ್‌ ಬಳಿ ಕೊಲೆಯ ವಿಚಾರ ತಿಳಿಸುತ್ತಾಳೆ. ಶವವನ್ನು ಯಾರಿಗೂ ಸಿಗದಂತೆ ನಾಶ ಮಾಡುವ ಉದ್ದೇಶದಿಂದ ಸುಂಟಿಕೊಪ್ಪ ಬಳಿಯ ತೋಟಕ್ಕೆ ತಂದು ಬೆಂಕಿ ಹಚ್ಚಿ ಆರೋಪಿಗಳು ಕಾರಿನಲ್ಲಿ ಮರಳಿದ್ದಾರೆ ಎನ್ನುವ ಆರೋಪದಡಿ ತನಿಖೆ ನಡೆಸಲಾಗುತ್ತಿತ್ತು. ನಿಹಾರಿಕಾ ಹಾಗೂ ನಿಖೀಲ್‌ ಈಗಾಗಲೇ ಬಂಧನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next