Advertisement

Madikeri; ತಲೆ ಎತ್ತಲಿದೆ ಗಾಂಧಿ ಸ್ಮಾರಕ: 1.60 ಕೋಟಿ ರೂ. ವೆಚ್ಚದ ಯೋಜನೆ

01:08 AM Dec 30, 2023 | Team Udayavani |

ಮಡಿಕೇರಿ: ಮಹಾತ್ಮಾ ಗಾಂಧಿ ನಿಧನಹೊಂದಿ 75 ವರ್ಷಗಳಾದರೂ ಮಡಿಕೇರಿಯಲ್ಲಿರುವ ಅವರ ನೆನಪಿನ ಕುರುಹಾದ ಚಿತಾಭಸ್ಮಕ್ಕೆ ಶಾಶ್ವತ ನೆಲೆ ಸಿಕ್ಕಿಲ್ಲ. ಈಗ ಜಿಲ್ಲಾಡಳಿತ 1.60 ಕೋಟಿ ರೂ. ವೆಚ್ಚದಲ್ಲಿ “ಗಾಂಧಿ ಸ್ಮಾರಕ’ದ ನಿರ್ಮಾಣಕ್ಕೆ ಮುಂದಾಗಿದೆ.

Advertisement

ದಿಲ್ಲಿಯಲ್ಲಿನ ರಾಜ್‌ ಘಾಟ್‌ ಮಾದರಿಯಲ್ಲೇ ಇಲ್ಲಿಯೂ ಗಾಂಧಿ ಸ್ಮಾರಕ ನಿರ್ಮಿಸ ಬೇಕೆಂದು ಕೊಡಗು ಜಿಲ್ಲಾ ಸರ್ವೋದಯ ಸಮಿತಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಕಳೆದ ಬಜೆಟ್‌ನಲ್ಲಿ ಸರಕಾರ ನಗರದ ಗಾಂಧಿ ಮೈದಾನದ ಪ್ರದೇಶದಲ್ಲಿ “ಗಾಂಧಿ ಸ್ಮಾರಕ ಉದ್ಯಾನವನ’ ನಿರ್ಮಾಣಕ್ಕೆ 50 ಲಕ್ಷ ರೂ. ಘೋಷಿಸಿತ್ತು. ಇದಕ್ಕೆ ಪೂರಕವಾಗಿ ಆಗಿನ ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ ಅವರು 32 ಸೆಂಟ್ಸ್‌ ನಿವೇಶನವನ್ನು ಸ್ಮಾರಕಕ್ಕಾಗಿ ಮಂಜೂರು ಮಾಡಿದ್ದರು. ಅದರಂತೆ ಕಂದಾಯ ಇಲಾಖೆಯ ವಶದಲ್ಲಿದ್ದ ಗಾಂಧಿ ಮಂಟಪದ ಜಾಗವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಲಾಗಿದೆ. ಜತೆಗೆ ಸರಕಾರ ಬಿಡುಗಡೆ ಮಾಡಿದ 50 ಲಕ್ಷ ರೂ. ಗಳನ್ನೂ ನಿರ್ಮಿತಿ ಕೇಂದ್ರಕ್ಕೆ ಹಸ್ತಾಂತರಿಸಿ ಕಾಮಗಾರಿಯ ಹೊಣೆ ವಹಿಸಲಾಗಿದೆ. ಮಡಿಕೇರಿ ಶಾಸಕ ಡಾ| ಮಂತರ್‌ ಗೌಡ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಖಜಾನೆಯಲ್ಲಿದೆ ಚಿತಾಭಸ್ಮ
1934ರ ಫೆ. 21 ರಂದು 3 ದಿನಗಳ ಕಾಲ ಕೊಡಗಿಗೆ ಭೇಟಿ ನೀಡಿದ್ದ ಮಹಾತ್ಮಾ ಗಾಂಧಿ, ಪ್ರಸ್ತುತ‌ ಇರುವ ಗಾಂಧಿ ಮಂಟಪದ ದಿಬ್ಬದಲ್ಲಿ ಭಾಷಣ ಮಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಯುವ ಸಮೂಹಕ್ಕೆ ಕರೆ ನೀಡಿದ್ದರು. ಇದಕ್ಕೆ ಗಾಂಧಿ ಗುಡ್ಡವೆಂಬ ಹೆಸರೂ ಇದೆ. 1948ರಲ್ಲಿ ಗಾಂಧೀಜಿ ಹತ್ಯೆಯಾಗಿ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರದ ಬಳಿಕ ಸ್ವಾತಂತ್ರ್ಯ ಹೋರಾಟಗಾರ ಕೊಳ್ಳಿಮಾಡ ದೇವಯ್ಯ ಅವರು ಚಿತಾಭಸ್ಮವನ್ನು ಕೊಡಗಿಗೆ ತಂದು ಒಂದು ಭಾಗವನ್ನು ಕಾವೇರಿ ನದಿಯಲ್ಲಿ ವಿಸರ್ಜಿಸಿದ್ದರು. ಉಳಿದ ಭಸ್ಮವನ್ನು ಜಿಲ್ಲಾ ಖಜಾನೆಯಲ್ಲಿರಿಸಲಾಗಿತ್ತು. ಪ್ರತೀ ಜನವರಿ 30ರಂದು ನಡೆಯುವ ಹುತಾತ್ಮರ ದಿನಾಚರಣೆ ಸಂದರ್ಭ ಚಿತಾಭಸ್ಮವನ್ನು ಮೆರವಣಿಗೆಯಲ್ಲಿ ಗಾಂಧಿ ಮಂಟಪಕ್ಕೆ ತಂದು ಸರ್ವಧರ್ಮ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ.

ಸರ್ವೋದಯ ಸಮಿತಿಯ ಹಲವು ವರ್ಷಗಳ ಪ್ರಯತ್ನಕ್ಕೆ ಫ‌ಲ ಸಿಕ್ಕಿದೆ. ಸುಂದರ ಸ್ಮಾರಕ ನಿರ್ಮಾಣದ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಗೌರವ ಅರ್ಪಿಸುವ ಕಾರ್ಯವಾಗಬೇಕು.
– ಟಿ.ಪಿ. ರಮೇಶ್‌, ಮಾಜಿ ಅಧ್ಯಕ್ಷರು, ಕೊಡಗು ಜಿಲ್ಲಾ ಸರ್ವೋದಯ ಸಮಿತಿ

ಗಾಂಧಿ ಸ್ಮಾರಕ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಅಗತ್ಯ ನೆರವನ್ನು ನೀಡಲಾಗುವುದು. ಶಾಸಕರು, ಸಂಸದರ‌ು, ವಿಧಾನ ಪರಿಷತ್‌ ಸದಸ್ಯರು ಹಾಗೂ ನಗರಸಭೆಯ ನೆರವಿನಿಂದ ಆರ್ಥಿಕ ಕ್ರೋಢೀಕರಣದ ಮೂಲಕ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು.
ಡಾ| ಮಂತರ್‌ ಗೌಡ,ಶಾಸಕರು, ಮಡಿಕೇರಿ ಕ್ಷೇತ್ರ

Advertisement
Advertisement

Udayavani is now on Telegram. Click here to join our channel and stay updated with the latest news.

Next