ಬೆಂಗಳೂರು: ಮಡಿಕೇರಿ ಪಟ್ಟಣದಲ್ಲಿರುವ ಐತಿಹಾಸಿಕ ಕೋಟೆ ಹಾಗೂ ಅರಮನೆಯನ್ನು ಅ.31ರೊಳಗೆ ಪುರಾತತ್ವ ಇಲಾಖೆಗೆ ಹಸ್ತಾಂತರ ಮಾಡಬೇಕೆಂದು ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಈ ಕುರಿತಂತೆ ಆಲೂರು ಸಿದ್ದಾಪುರ ಗ್ರಾಮದ ಜೆ.ಎಸ್.ವಿರೂಪಾಕ್ಷಯ್ಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ, ರಾಜ್ಯ ಸರ್ಕಾರಕ್ಕೆ ಈ ನಿರ್ದೇಶನ ನೀಡಿತು.
ವಿಚಾರಣೆ ವೇಳೆ, ಕೋಟೆ ಹಾಗೂ ಅರಮನೆಯನ್ನು ಅ.31ರೊಳಗೆ ಪುರಾತತ್ವ ಇಲಾಖೆಗೆ ಹಸ್ತಾಂತರಿಸುದಾಗಿ ಸರ್ಕಾರವೇ ಹೇಳಿದೆ. ಅದರಂತೆ, ಹಸ್ತಾಂತರ ನಿಗದಿತ ಅವಧಿಯಲ್ಲಿ ಆಗಲಿ. ಬಳಿಕ ಪುರಾತತ್ವ ಇಲಾಖೆ ಅಧಿಕಾರಿಗಳು ಕೋಟೆ ಹಾಗೂ ಅರಮನೆ ಸ್ಥಳಕ್ಕೆ ಭೇಟಿ ನೀಡಿ ಅದು ಶಿಥಿಲಾವಸ್ಥೆಯಲ್ಲಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಿ ತಾತ್ಕಾಲಿಕವಾಗಿ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
ಇದಕ್ಕೂ ಮೊದಲು ಪುರಾತತ್ವ ಇಲಾಖೆ ಪರ ವಕೀಲರು ವಾದ ಮಂಡಿಸಿ, ಐತಿಹಾಸಿಕ ಕೋಟೆ ಮತ್ತು ಅರಮನೆಯನ್ನು ಸಂರಕ್ಷಿತ ಪ್ರದೇಶ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ ಅದು ಸದ್ಯಕ್ಕೆ ರಾಜ್ಯ ಸರ್ಕಾರದ ಸುಪರ್ದಿಯಲ್ಲಿದೆ ಎಂದರು. ಸರ್ಕಾರದ ಪರ ವಕೀಲರು ವಾದ ಮಂಡಿಸಿ ಕೋಟೆ ಪ್ರದೇಶದಲ್ಲಿ ಕೆಲವೊಂದು ಸರ್ಕಾರಿ ಕಚೇರಿಗಳಿದ್ದು, ಅವುಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ ಎಂದರು.
ಈ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಮಡಿಕೇರಿ ಪಟ್ಟಣದಲ್ಲಿ ರಾಜರ ಆಡಳಿತವಿತ್ತು, ಸುಮಾರು 350 ವರ್ಷಗಳ ಹಿಂದೆ ನಿರ್ಮಿಸಿದೆ ಎನ್ನಲಾದ ಕೋಟೆ, ಗದ್ದಿಗೆ ಹಾಗೂ ಗೋಪುರ ರಾಜ್ಯ ಸರ್ಕಾರದ ಸುಪರ್ದಿಯಲ್ಲಿದೆ. ಅಲ್ಲಿ ಸರ್ಕಾರಿ ಕಚೇರಿಗಳಿವೆ, ಆದರೆ ಆ ಕೋಟೆಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹಾಗಾಗಿ ಅದು ಶಿಥಿಲಾವಸ್ಥೆಗೆ ತಲುಪಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.