Advertisement

Madikeri: ಮನೆಗೆ ನುಗ್ಗಿ ವೃದ್ಧ ಮಹಿಳೆಗೆ ಹಲ್ಲೆಗೈದು ದರೋಡೆ: ಆರೋಪಿ ಬಂಧನ

08:17 PM Nov 06, 2023 | Team Udayavani |

ಮಡಿಕೇರಿ:ಜಿಲ್ಲಾ ಕೇಂದ್ರ ಮಡಿಕೇರಿಯ ಹೃದಯ ಭಾಗದ ಮನೆಯೊಂದರಲ್ಲಿದ್ದ ವೃದ್ಧ ಮಹಿಳೆಯ ಮೇಲೆ ಹಲ್ಲೆ ಮಾಡಿ ದರೋಡೆ ನಡೆಸಿದ ಘಟನೆ ನಡೆದು ಹನ್ನೆರಡು ಗಂಟೆ ಕಳೆಯುವಷ್ಟರಲ್ಲೆ, ಆರೋಪಿಯನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಬಂಧಿತನನ್ನು ರಾಜಸ್ಥಾನ ಮೂಲದ ವಿಕಾಸ್ ಜೋರ್ಡಿಯಾ (33) ಎಂದು ಗುರುತಿಸಲಾಗಿದ್ದು, ಈತನ ಬಳಿಯಲ್ಲಿದ್ದ 27 ಗ್ರಾಂನ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ನಗರದ ಐಡಿಬಿಐ ಬ್ಯಾಂಕ್ ಮುಂಭಾಗದ ಮನೆಯ ನಿವಾಸಿ, ಬಿ.ಇ.ಸಾಕಮ್ಮ ಪ್ರಭಾಕರ ಎಂಬವರ ಮೇಲೆ ಭಾನುವಾರ ಸಂಜೆ ಸುಮಾರು 6 ಗಂಟೆಯ ಹೊತ್ತಿಗೆ, ಮನೆಗೆ ಹಿಂಭಾಗದಿಂದ ಅಕ್ರಮವಾಗಿ ಪ್ರವೇಶಿಸಿದ ಆರೋಪಿ, ಸಾಕಮ್ಮ ಅವರ ಮೇಲೆ ಹಲ್ಲೆ ನಡೆಸಿ ಮಾಂಗಲ್ಯ ಸರ ಹಾಗೂ ಉಂಗುರವನ್ನು ದರೋಡೆ ಮಾಡಿದ್ದ.

ಕ್ಷಿಪ್ರ ಕಾರ್ಯಾಚರಣೆ ಘಟನೆ ನಡೆದ ಬಳಿಕ ಎಸ್‌ಪಿ ಕೆ. ರಾಮರಾಜನ್, ಎಎಸ್‌ಪಿ ಸುಂದರ್ ರಾಜ್ ಕೆ.ಎಸ್. ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಪೊಲೀಸ್ ಠಾಣೆಯ ಪಿಎಸ್‌ಐ ಲೋಕೇಶ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತಕ್ಷಣ ಭೇಟಿ ನೀಡಿ, ಸಾಕ್ಷಾಧಾರಗಳನ್ನು ಕಲೆಹಾಕಿದ್ದರಾದರೆ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಉಮೇಶ್, ಉಪ್ಪಳಿಕೆ ಅವರು ಎಲ್ಲಾ ಹೊಟೇಲ್, ಹೋಂ ಸ್ಟೇ ಮತ್ತು ರೆಸಾರ್ಟ್ ಮಾಹಿತಿ ನೀಡಿ ಆರೋಪಿ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು.

ಪ್ರಕರಣವನ್ನು ಭೇದಿಸುವ ಸಲುವಾಗಿ ಮಡಿಕೇರಿ ನಗರ ವೃತ್ತದ ಸಿಪಿಐ ಅನೂಪ್ ಮಾದಪ್ಪ ಅವರು ಉಪವಿಭಾಗ ಮಟ್ಟದಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳು ಮತ್ತು ಡಿಸಿಆರ್‌ಬಿ ಸಿಬ್ಬಂದಿಗಳನ್ನು ಒಳಗೊಂಡಅತೆ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು, ನಗರದಂಚಿನ ಇಬ್ಬನಿ ರೆಸಾರ್ಟ್ ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಆರೋಪಿ ವಿಕಾಸ್ ಜೋರ್ಡಿಯಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಪ್ರಕರಣವನ್ನು ಭೇದಿಸುವಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಎಎಸ್‌ಪಿ ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.

ವಿಶೇಷ ಸೂಚನೆ: ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಇಲ್ಲವೆ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ. ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಎಸ್‌ಪಿ ಕೆ. ರಾಮರಾಜನ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next