Advertisement

Madikeri ಮಾದಕ ಪದಾರ್ಥ ಸಾಗಾಟ ಪ್ರಕರಣ; ಮೂವರಿಗೆ 10 ವರ್ಷ ಕಠಿನ ಜೈಲು ಶಿಕ್ಷೆ

10:53 PM Feb 04, 2024 | Team Udayavani |

ಮಡಿಕೇರಿ: ನಿಷೇಧಿತ ಮಾದಕ ಪದಾರ್ಥ ಹ್ಯಾಶಿಷ್‌ ಆಯಿಲ್‌ (ಗಾಂಜಾದಿಂದ ತೆಗೆಯುವ ಎಣ್ಣೆ) ಸಾಗಾಟ ಮಾಡುತ್ತಿದ್ದ ಮೂವರಿಗೆ ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷಗಳ ಕಠಿನ ಜೈಲು ಶಿಕ್ಷೆ ಮತ್ತು ತಲಾ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

Advertisement

ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಗಳಾದ ಅಹಮದ್‌ ಕಬೀರ್‌ (37), ಅಬ್ದುಲ್‌ ಖಾದರ್‌ (37) ಹಾಗೂ ಮೊಹಮ್ಮದ್‌ ಮುಜಮಿಲ್‌ (37) ಶಿಕ್ಷೆಗೆ ಒಳಗಾದವರು.

ಭಾಗಮಂಡಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2022ರ ಅಕ್ಟೋಬರ್‌ 29ರಂದು ಭಾಗಮಂಡಲ-ಮಡಿಕೇರಿ ಜಂಕ್ಷನ್‌ನಲ್ಲಿರುವ ಐಬಿ ರಸ್ತೆಯಲ್ಲಿ ಈ ಮೂವರು ನಿಷೇಧಿತ ಮಾದಕ ಪದಾರ್ಥವನ್ನು ಮಾರಾಟ ಮಾಡುವ ಸಲುವಾಗಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದರು.

ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಭಾಗಮಂಡಲ ಠಾಣಾಧಿಕಾರಿ ಪ್ರಿಯಾಂಕಾ, ಎಎಸ್‌ಐ ಬೆಳ್ಳಿಯಪ್ಪ ಎಂ.ಸಿ., ಮಹದೇವ ಸ್ವಾಮಿ ಹಾಗೂ ಸಿಬಂದಿ ದಾಳಿ ಮಾಡಿ ಕಾರನ್ನು ತಡೆದು ಪರಿಶೀಲಿಸಿದಾಗ 1 ಕೆ.ಜಿ. 160 ಗ್ರಾಂ ಹ್ಯಾಶಿಷ್‌ ಆಯಿಲ್‌ ಪತ್ತೆಯಾಗಿತ್ತು. ಕಾರಿನಲ್ಲಿದ್ದ ಮೂವರನ್ನು ಎನ್‌ಡಿಪಿಎಸ್‌ ಕಾಯಿದೆಯಡಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ತನಿಖೆ ಪೂರ್ಣಗೊಳಿಸಿದ ತನಿಖಾಧಿಕಾರಿ ಪ್ರಿಯಾಂಕಾ 2022ರ ನವೆಂಬರ್‌ 21ರಂದು ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.

Advertisement

ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಎನ್‌ಡಿಪಿಎಸ್‌ ಕಾಯಿದೆ ಅಡಿಯಲ್ಲಿ 10 ವರ್ಷ ಕಠಿನ ಜೈಲು ಶಿಕ್ಷೆ ಪ್ರಕಟಿಸಿದೆ. ಮಾತ್ರವಲ್ಲದೇ ಪ್ರತಿ ಆರೋಪಿಗೆ ತಲಾ 1 ಲಕ್ಷ ರೂ. ದಂಡ ವಿಧಿಸಿದ್ದು, ದಂಡ ನೀಡಲು ತಪ್ಪಿದ್ದಲ್ಲಿ ಮತ್ತೆ 3 ವರ್ಷಗಳ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ.

ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಭಾಗಮಂಡಲ ಠಾಣಾಧಿಕಾರಿ ಪ್ರಿಯಾಂಕಾ, ಎಎಸ್‌ಐ ಎಂ.ಸಿ. ಬೆಳ್ಳಿಯಪ್ಪ (ಪ್ರಸಕ್ತ ನಿವೃತ್ತ), ಸಿಬಂದಿ ಹಾಗೂ ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ವಾದ ಮಂಡಿಸಿ ಕಠಿಣ ಜೈಲು ಶಿಕ್ಷೆ ವಿಧಿಸುವಲ್ಲಿ ಉತ್ತಮ ಕಾರ್ಯನಿರ್ವಹಿಸಿರುವ ಸರಕಾರಿ ಅಭಿಯೋಜಕಿ ಕೆ.ಜಿ. ಅಶ್ವಿ‌ನಿ ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ರಾಮರಾಜನ್‌ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next