ಮಡಿಕೇರಿ: ಏಡಿ ಹಿಡಿಯಲು ತೆರಳಿದ್ದ ಬಾಲಕನೊಬ್ಬ ಹಾರಂಗಿ ಎಡದಂಡೆ ನಾಲೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಗ್ಗೆ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಬಳಿ ಸಂಭವಿಸಿದೆ.
ಕೂಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ನಿವಾಸಿ ಅಣ್ಣಪ್ಪ ಅವರ ಪುತ್ರ ಮದಲಾಪುರ ಬಳಿಯ ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಅನಿತ್(14) ಮೃತಪಟ್ಟ ಬಾಲಕ.
ತನ್ನ ಗೆಳೆಯರೊಂದಿಗೆ ಹಾರಂಗಿ ಮುಖ್ಯ ನಾಲೆಯ ರಸ್ತೆಯ ಮೂಲಕ ಶಾಲೆಗೆ ಹೋಗುವ ಸಂದರ್ಭ, ಅನಿತ್ ತುಂಬಿ ಹರಿಯುತ್ತಿದ್ದ ನಾಲೆಯ ಬದಿಯಲ್ಲಿ ಕಂಡ ಏಡಿಯನ್ನು ಹಿಡಿಯಲು ಪ್ರಯತ್ನಿಸಿದ್ದಾನೆ. ಈ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದು ಸಾವನ್ನಪ್ಪಿದ್ದಾನೆ. ಆತನ ಸಹಪಾಠಿ ರಕ್ಷಿಸುವ ಪ್ರಯತ್ನ ಮಾಡಿದರೂ ಫಲಕಾರಿಯಾಗಲಿಲ್ಲ ಎಂದು ಹೇಳಲಾಗಿದೆ.
ಬಾಲಕ ನೀರಿನಲ್ಲಿ ಮುಳುಗಿರುವ ವಿಷಯ ತಿಳಿದು ಹಾರಂಗಿಯ ನೀರಾವರಿ ಇಲಾಖೆಯ ಅಧಿಕಾರಿಗಳು ಒಂದು ಗಂಟೆ ಕಾಲ ನಾಲೆಯ ನೀರನ್ನು ಸ್ಥಗಿತಗೊಳಿಸಿ, ಶೋಧ ಕಾರ್ಯಕ್ಕೆ ಅನುವು ಮಾಡಿಕೊಟ್ಟರು. ಅಗ್ನಿಶಾಮಕ ದಳದ ಸಿಬಂದಿ ಸುಮಾರು ನೂರು ಮೀಟರ್ ದೂರದಲ್ಲಿದ್ದ ಬಾಲಕನ ಮೃತದೇಹ ಪತ್ತೆ ಹಚ್ಚಿ ಹೊರ ತೆಗೆದರು.
ಶಾಸಕರ ಭೇಟಿ
ಘಟನಾ ಸ್ಥಳಕ್ಕೆ ಶಾಸಕ ಡಾ| ಮಂತರ್ ಗೌಡ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು. ಶವಸಂಸ್ಕಾರಕ್ಕೆಂದು ವೈಯಕ್ತಿಕ ಸಹಾಯಧನ ನೀಡಿದರು. ಪರಿಹಾರ ಒದಗಿಸುವಂತೆ ನೀರಾವರಿ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು. ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.