Advertisement

ಮಡಿ ಕಾಯಕ ಬಿಡದ ತಾಪಂ ಅಧ್ಯಕ್ಷೆ

10:53 AM Apr 29, 2019 | keerthan |

ಮಂಡ್ಯ: ಇವರು ಮಂಡ್ಯ ತಾಲೂಕು ಪಂಚಾಯಿತಿ ಅಧ್ಯಕ್ಷೆ. ಹೆಸರು ಶೈಲಜಾ. ಸಂತೆಕಸಲಗೆರೆ ಕ್ಷೇತ್ರದಿಂದ ಜೆಡಿಎಸ್‌ ಪಕ್ಷದಿಂದ ತಾಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಹದಿನೈದು ವರ್ಷದಿಂದ ಮದುವೆಗಳಲ್ಲಿ ಮಡಿಬಟ್ಟೆ ಹಾಸುವ ಕಾಯಕವನ್ನು ನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದಾರೆ. ತಾಪಂ ಅಧ್ಯಕ್ಷೆಯಾಗಿದ್ದರೂ ಅಧಿಕಾರ ಪಿತ್ತ, ಅಹಂಕಾರ ತಲೆಗೇರಿಸಿಕೊಳ್ಳದೆ ವೃತ್ತಿ ಧರ್ಮ ಪಾಲನೆ ಮಾಡುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ.

Advertisement

ಶೈಲಜಾ ಮೂಲತಃ ಟಿ.ನರಸೀಪುರ ತಾಲೂಕಿನವರು. ಮಂಡ್ಯ ತಾಲೂಕಿನ ಸಂತೆ ಕಸಲಗೆರೆಯಲ್ಲಿ ಅಜ್ಜಿ ಮನೆ ಇತ್ತು. ರಜೆ ಇರುವಾಗಲೆಲ್ಲಾ ಇಲ್ಲಿಗೆ ಬಂದು ಹೋಗುತ್ತಿದ್ದರು. ಚಿಕ್ಕ ವಯಸ್ಸಿನಿಂದಲೂ ಮಡಿಬಟ್ಟೆ ಹಾಸುವ ಕಾಯಕವನ್ನು ರೂಢಿಸಿಕೊಂಡು ಬಂದಿರುವ ಶೈಲಜಾ ನಂತರದಲ್ಲಿ ಸಂತೆಕಸಲಗೆರೆಯ ತಿಮ್ಮಯ್ಯರನ್ನು ವಿವಾಹವಾದರು.

ವಿವಾಹವಾದ ನಂತರ ಪತಿಯೊಂದಿಗೆ ಸೇರಿಕೊಂಡು ಮದುವೆ ಸಮಾರಂಭಗಳಲ್ಲಿ ಮಡಿಬಟ್ಟೆ ಹಾಸುವುದನ್ನು ಚಾಚೂ ತಪ್ಪದೆ ನಡೆಸಿ ಕೊಂಡು ಬರುತ್ತಿದ್ದಾರೆ. ಈ ಕಾಯಕವನ್ನು ಅತ್ಯಂತ ಗೌರವದಿಂದ ಕಾಣುವ ಶೈಲಜಾ, ಮಡಿ ಬಟ್ಟೆಯನ್ನು ತುಳಿದುಕೊಂಡು ಹೋದವರ ಹಿಂದೆ ತೆರಳಿ ನಂತರ ಆ ಬಟ್ಟೆಯನ್ನು ಕೈಗೆತ್ತಿಕೊಂಡು ಮುಂದೆ ಹಾಸುವವರಿಗೆ ನೀಡುತ್ತಾರೆ. ಊರಿನಲ್ಲಿ ಒಟ್ಟು 11 ಕುಟುಂಬಗಳು ಮಡಿ ಬಟ್ಟೆ ಹಾಸುವ ಕಾಯಕ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಯಾವುದೇ ಮದುವೆ ನಡೆದರೂ ಈ ಕುಟುಂಬಗಳಿಗೆ ಮಡಿ ಬಟ್ಟೆ ಹಾಸುವ ಕರೆ ಬರುತ್ತದೆ. ಅವರು ಹೋಗಿ ಮಡಿ ಬಟ್ಟೆ ಹಾಸುವ ಕರ್ತವ್ಯ ನಿರ್ವ ಹಿಸಬೇಕು. ಈ ಕೆಲಸ ಮಾಡುವುದಕ್ಕೆ ವರ್ಷಕ್ಕೆ ಊರಿನವರೆಲ್ಲರೂ ಸೇರಿ ಈ ಕುಟುಂಬಗಳಿಗೆ ತಲಾ 50 ರಿಂದ 60 ಸೇರು ಭತ್ತ ನೀಡುತ್ತಾರೆ. ಇದೇ ಅವರ ಜೀವನಾಧಾರವೂ ಆಗಿದೆ.

ಏಳನೇ ತರಗತಿಯವರೆಗೆ ಓದಿರುವ ಶೈಲಜಾ ಕಳೆದ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸಂತೆ ಕಸಲಗೆರೆ ಕ್ಷೇತ್ರದಿಂದ ಜೆಡಿಎಸ್‌ ಪಕ್ಷದಿಂದ ಸರ್ಧಿಸಿ ಆಯ್ಕೆಯಾದರು. ಪ್ರಸ್ತುತ ತಾಪಂ ಅಧ್ಯಕ್ಷೆಯಾಗಿ ಶೈಲಜಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಧಿಕಾರವಿದ್ದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಕಾಯಕವನ್ನು ಮುಂದುವರೆಸುತ್ತಾ ಅದರಲ್ಲೇ ಆನಂದ, ತೃಪ್ತಿಯನ್ನು ಕಾಣುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next