ಭೋಪಾಲ್: ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್, ಸೀಲ್ ಡೌನ್ ಆದೇಶ ಜಾರಿಯಲ್ಲಿದೆ. ಮತ್ತೊಂದೆಡೆ ಮಧ್ಯಪ್ರದೇಶದಲ್ಲಿ 2,560 ಕೋವಿಡ್ 19 ಪ್ರಕರಣ ಪತ್ತೆಯಾಗಿದ್ದು, ಸಾವಿನ ಸಂಖ್ಯೆ ರಾಜ್ಯದಲ್ಲಿ 130ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಇಂದೋರ್ ನಲ್ಲಿ ಬರೋಬ್ಬರಿ 1,476 ಪ್ರಕರಣಗಳು ಪತ್ತೆಯಾಗಿದ್ದು, 65 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿ ಭೋಪಾಲ್ ನಲ್ಲಿ 483 ಪ್ರಕರಣಗಳು ಪತ್ತೆಯಾಗಿದ್ದು, 14 ಜನರು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಆರು ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ ಯಾವುದೇ ಹೊಸ ಕೋವಿಡ್ 19 ವೈರಸ್ ಪ್ರಕರಣ ಪತ್ತೆಯಾಗಿಲ್ಲ. ಕರ್ನಾಟಕದಲ್ಲಿ 535ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 216 ಜನರು ಗುಣಮುಖರಾಗಿದ್ದಾರೆ, ಈವರೆಗೆ 21 ಮಂದಿ ಕೋವಿಡ್ 19 ವೈರಸ್ ಗೆ ಸಾವನ್ನಪ್ಪಿದ್ದಾರೆ.
ಬಿಹಾರದಲ್ಲಿ 9 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ರಾಜ್ಯದಲ್ಲಿ 392 ಪ್ರಕರಣಗಳು ವರದಿಯಾಗಿದೆ. ತಮಿಳುನಾಡಿನಲ್ಲಿ ಬುಧವಾರ 104 ಪ್ರಕರಣ ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು 2,162 ಕೋವಿಡ್ 19 ಪ್ರಕರಣ ಪತ್ತೆಯಾಗಿದೆ. 1210 ಮಂದಿ ಗುಣಮುಖರಾಗಿದ್ದು, ಈವರೆಗೆ 27 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವಿವರಿಸಿದೆ.
ಭಾರತದಲ್ಲಿ ಒಟ್ಟು 31,709 ಮಂದಿಗೆ ಕೋವಿಡ್ 19 ವೈರಸ್ ದೃಢಪಟ್ಟಿದ್ದು, 7,797 ಜನರು ಗುಣಮುಖರಾಗಿದ್ದಾರೆ. 1008 ಮಂದಿ ಸಾವನ್ನಪ್ಪಿದ್ದಾರೆ.