Advertisement

ಮಧ್ಯಪ್ರದೇಶದ 22 ಕಾಂಗ್ರೆಸ್‌ ಶಾಸಕರಿಗೆ ಸ್ಪೀಕರ್‌ ನೋಟಿಸ್‌

01:25 PM Mar 13, 2020 | Hari Prasad |

ಭೋಪಾಲ್‌: ಮಧ್ಯಪ್ರದೇಶ ವಿಧಾನ ಸಭೆಯ ಸದಸ್ಯತ್ವ ತೊರೆದಿರುವ ಕಾಂಗ್ರೆಸ್‌ನ 22 ಶಾಸಕರಿಗೆ ವಿಧಾನಸಭಾ ಸ್ಪೀಕರ್‌ ಎನ್‌.ಪಿ. ಪ್ರಜಾಪತಿ ನೋಟಿಸ್‌ ಜಾರಿಗೊಳಿಸಿದ್ದಾರೆ. ಮಧ್ಯಪ್ರದೇಶ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಎ.ಪಿ. ಸಿಂಗ್‌ ಈ ವಿಷಯ ತಿಳಿಸಿದ್ದಾರೆ.

Advertisement

‘ಶುಕ್ರವಾರ ಸ್ಪೀಕರ್‌ ಮುಂದೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ವಿಚಾರಣೆಯಲ್ಲಿ, ತಮ್ಮ ರಾಜೀನಾಮೆ ನಿರ್ಧಾರ ಸ್ವಯಂಪ್ರೇರಿತವೋ ಅಥವಾ ಒತ್ತಡದಿಂದ ಕೈಗೊಂಡ ನಿರ್ಧಾರವೋ ಎಂಬುದರ ಬಗ್ಗೆ ಸ್ಪಷ್ಟವಾಗಿ ವಿವರಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ವಿಶ್ವಾಸಮತಕ್ಕೆ ಮನವಿ: 22 ಶಾಸಕರ ರಾಜೀನಾಮೆ ಯಿಂದ ಅಲ್ಪಮತಕ್ಕೆ ಕುಸಿದಿರುವ ಕಮಲ್‌ನಾಥ್‌ ಸರಕಾರಕ್ಕೆ ಮಾ. 16ರಂದು ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚಿಸಲು ರಾಜ್ಯಪಾಲರನ್ನು ಕೋರುವುದಾಗಿ ಬಿಜೆಪಿ ತಿಳಿಸಿದೆ.

ಭೋಪಾಲ್‌ನಲ್ಲಿ ಭರ್ಜರಿ ಸ್ವಾಗತ
ಹೊಸದಿಲ್ಲಿಯಿಂದ ಗುರುವಾರ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ಗೆ ಹಿಂದಿರುಗಿದ ಸಿಂಧಿಯಾರಿಗೆ ಮಧ್ಯಪ್ರದೇಶ ಬಿಜೆಪಿಯಿಂದ ಭವ್ಯ ಸ್ವಾಗತ ಸಿಕ್ಕಿದೆ. ಭೋಪಾಲ್‌ನ ರಾಜಾಭೋಜ ವಿಮಾನ ನಿಲ್ದಾಣದಲ್ಲಿ ಅವರನ್ನು ನೋಡಲು ಅಪಾರ ಜನಸ್ತೋಮ ಜಮಾಯಿಸಿತ್ತು. ಕೇಂದ್ರ ಸಚಿವ ನರೇಂದ್ರ ಸಿಂಗ್‌ ತೋಮರ್‌ ಜತೆಗೆ ಆಗಮಿಸಿದ ಅವರನ್ನು ಸಿಂಧಿಯಾ ಸೋದರತ್ತೆ ಬಿಜೆಪಿ ಶಾಸಕಿ ಯಶೋಧರಾ ರಾಜೇ ಸಿಂಧಿಯಾ, ರಾಜ್ಯ ಬಿಜೆಪಿ ಅಧ್ಯಕ್ಷ ವಿ.ಡಿ. ಶರ್ಮಾ, ವಿಪಕ್ಷ ನಾಯಕ ಗೋಪಾಲ್‌ ಭಾರ್ಗವ, ಮಾಜಿ ಸಚಿವರಾದ ರಾಮ್‌ಪಾಲ್‌ ಸಿಂಗ್‌, ಭೂಪೇಂದ್ರ ಸಿಂಗ್‌ ಹಾಗೂ ನರೋತ್ತಮ್‌ ಸಿಂಗ್‌ ಸ್ವಾಗತಿಸಿದರು.

ಅನಂತರ, ವಿಮಾನ ನಿಲ್ದಾಣದಿಂದ 15 ಕಿ.ಮೀ. ದೂರದಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ಸಿಂಧಿಯಾ ಅವರನ್ನು ರೋಡ್‌ ಶೋ ಮೂಲಕ ಕರೆದೊಯ್ಯಲಾಯಿತು. ದಾರಿಯ ಇಕ್ಕೆಲಗಳಲ್ಲಿ ಅಪಾರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಸಿಂಧಿಯಾ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.

Advertisement

ಸ್ವಾರ್ಥ ಸಾಧನೆಯಾಗಿ ತಮ್ಮ ಸಿದ್ಧಾಂತವನ್ನೇ ಸಿಂಧಿಯಾ ಮರೆತಿದ್ದಾರೆ. ಕಾಂಗ್ರೆಸ್‌ನಲ್ಲಿ ಗೌರವ ಸಿಕ್ಕಿಲ್ಲವೆಂದು ಹೇಳುವ ಅವರಿಗೆ ಬಿಜೆಪಿಯಲ್ಲೂ ಗೌರವ ಸಿಗುವುದಿಲ್ಲ. ಇಲ್ಲಿಯೂ ಸಲ್ಲದೆ, ಎಲ್ಲಿಯೂ ಸಲ್ಲದಂತವರಾಗುತ್ತಾರೆ.
– ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next