ಭೋಪಾಲ್ : ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರಕಾರ ಮಂಡಿಸಿದ್ದ ಗುಂಪು ಥಳಿತ ಮಸೂದೆಯ ಪರ ಇಬ್ಬರು ಭಾರತೀಯ ಜನತಾ ಪಕ್ಷದ ಶಾಸಕರು ಮತ ಚಲಾಯಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮಧ್ಯಪ್ರದೇಶ ವಿಧಾನಸಭೆಯಲ್ಲಿ ಇಂದು ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರಕಾರವು ಕ್ರಿಮಿನಲ್ ಲಾ (ಮಧ್ಯಪ್ರದೇಶ ತಿದ್ದುಪಡಿ) ಮಸೂದೆಯನ್ನು ಸದನದಲ್ಲಿ ಮಂಡಿಸಿತ್ತು. ಈ ಮಸೂದೆಯ ಪ್ರಕಾರ ಗುಂಪು ಥಳಿತ ಪ್ರಕರಣಗಳಲ್ಲಿ ಅಪರಾಧ ಸಾಬೀತುಗೊಂಡಲ್ಲಿ ಅಂತಹ ವ್ಯಕ್ತಿಗಳಿಗೆ ಮೂರು ವರ್ಷ ಕಾರಾಗೃಹ ವಾಸ ವಿಧಿಸಬಹುದಾಗಿರುತ್ತದೆ.
ಈ ಮಸೂದೆಯ ಪರ 122 ಮತಗಳನ್ನು ಪಡೆಯುವಲ್ಲಿ ಸರಕಾರ ಯಶಸ್ವಿಯಾಯಿತು. ಈ ಮಸೂದೆಯ ಪರ ಬಿಜೆಪಿ ಶಾಸಕರಾದ ನಾರಾಯಣ ತ್ರಿಪಾಠಿ ಮತ್ತು ಶರದ್ ಕೋಲ್ ಅವರು ಅಡ್ಡ ಮತ ಚಲಾಯಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಈ ಇಬ್ಬರೂ ಶಾಸಕರೂ ಪ್ರತ್ಯೇಕವಾಗಿ ಮಾತನಾಡಿ ಮುಖ್ಯಮಂತ್ರಿ ಕಮಲನಾಥ್ ಅವರನ್ನು ಸುಧಾರಣಾವಾದಿ ಮನುಷ್ಯ ಎಂದು ಕೊಂಡಾಡಿದ್ದಾರೆ.
ತ್ರಿಪಾಠಿ ಮತ್ತು ಕೋಲ್ ಅವರು ಈ ಹಿಂದೆ ಕಾಂಗ್ರಸ್ ಪಕ್ಷದಲ್ಲಿದ್ದರು. ಸದನ ಮುಕ್ತಾಯದ ಬಳಿಕ ಈ ಇಬ್ಬರೂ ಬಿಜೆಪಿ ಶಾಸಕರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಹಾಗೂ ಮುಖ್ಯಮಂತ್ರಿ ಕಮಲನಾಥ್ ಅವರೊಂದಿಗೆ ಭೋಜನ ಕೂಟವನ್ನೂ ಆಯೋಜಿಸಲಾಗಿದೆ ಎಂದು ತಿಳಿದುಬಂದಿದೆ.