ರೈಸನ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವದ ಸ್ಮರಣಾರ್ಥ ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಬರೇಲಿಯಲ್ಲಿ ನಡೆದ ಶಿಕ್ಷಾ ಮಹಾ ಕುಂಭ ರಾಜಕೀಯ ಬಿರುಗಾಳಿ ಎಬ್ಬಿಸಿದೆ.
ಕಾರ್ಯಕ್ರಮದ ಸಂದರ್ಭದಲ್ಲಿ, ಶಾಲಾ ಶಿಕ್ಷಣ ಸಚಿವ ರಾವ್ ಉದಯ್ ಪ್ರತಾಪ್ ಸಿಂಗ್ ಅವರು ಶಿಕ್ಷಣ ಕ್ಷೇತ್ರದಲ್ಲಿನ ಭ್ರಷ್ಟಾಚಾರದ ಬಗ್ಗೆ ಆಶ್ಚರ್ಯಕರ ಮಾತುಗಳನ್ನು ಆಡಿದರು. ರಾಜ್ಯದಲ್ಲಿ ನೂರಾರು ಶಿಕ್ಷಕರು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಸ್ವತಃ ಒಪ್ಪಿಕೊಂಡರು.
“10,000-15,000 ರೂ ಗಳಿಗೆ ಬದಲಿಗಳನ್ನು ನೇಮಿಸಿಕೊಳ್ಳುವ 500 ಶಿಕ್ಷಕರ ಬಗ್ಗೆ ನನಗೆ ವೈಯಕ್ತಿಕವಾಗಿ ತಿಳಿದಿದೆ. ನನ್ನ ಜಿಲ್ಲೆಯಲ್ಲಿಯೇ 100 ಶಿಕ್ಷಕರಿದ್ದಾರೆ” ಎಂದು ರಾವ್ ಉದಯ್ ಪ್ರತಾಪ್ ಸಿಂಗ್ ಹೇಳಿದರು.
ಆದರೆ, ಕರ್ತವ್ಯಲೋಪ ಎಸಗಿದ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಸಚಿವರು ಏನೂ ಹೇಳಿಲ್ಲ. ಸಚಿವರ ಹೇಳಿಕೆಗೆ ಕಾಂಗ್ರೆಸ್ ಪಕ್ಷ ಟೀಕೆ ಮಾಡಿದೆ.
“ಮಧ್ಯ ಪ್ರದೇಶ ಶಿಕ್ಷಣ ಸಚಿವರ ಈ ತಪ್ಪೊಪ್ಪಿಗೆಯು ತೀವ್ರ ಕಳವಳಕಾರಿಯಾಗಿದೆ. ಸುಮಾರು 500 ಅಪ್ರಾಮಾಣಿಕ ಶಿಕ್ಷಕರ ಬಗ್ಗೆ ತಿಳಿದಿದ್ದರೂ ನೀವು ಅವರನ್ನು ಏಕೆ ರಕ್ಷಿಸುತ್ತಿದ್ದೀರಿ? ಈ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಬೇಕು” ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್ ಹೇಳಿದರು.
ಸಿಂಘಾರ್ ಅವರು ತಮ್ಮ ಜಿಲ್ಲೆಯಲ್ಲಿ ಗುರುತಿಸಲಾದ ಕನಿಷ್ಠ 100 ಅಪ್ರಾಮಾಣಿಕ ಶಿಕ್ಷಕರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು, ಸಚಿವರು ತಮ್ಮ ಜವಾಬ್ದಾರಿಯನ್ನು ಎತ್ತಿಹಿಡಿಯಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.