Advertisement

ಮಧ್ಯಪ್ರದೇಶ ಬಿಕ್ಕಟ್ಟು, ಕಾಂಗ್ರೆಸ್‌ನದ್ದೇ ಎಡವಟ್ಟು?

09:56 AM Mar 12, 2020 | mahesh |

ಕಮಲ್‌ನಾಥ್‌ ನೇತೃತ್ವದ ಮಧ್ಯಪ್ರದೇಶ ಸರಕಾರಕ್ಕೆ 49 ವರ್ಷದ ಜ್ಯೋತಿರಾದಿತ್ಯ ಸಿಂಧಿಯಾ ಬಲವಾದ ಪೆಟ್ಟು ಕೊಟ್ಟಿದ್ದಾರೆ. ಒಂದು ಸಮಯದಲ್ಲಿ ರಾಹುಲ್‌ ಗಾಂಧಿಯ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ, ಆ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವ್ಯಕ್ತಿಯೇ ಇಂದು ಆ ಪಕ್ಷವನ್ನು ನೆಲಕ್ಕುರುಳಿಸಿದ್ದರ ಹಿಂದೆ ಬಲವಾದ ಕಾರಣಗಳೂ ಇವೆ. ಇದು ಏಕಾಏಕಿ ನಡೆದ ವಿದ್ಯಮಾನವೇನೂ ಅಲ್ಲ. ಸತ್ಯವೇನೆಂದರೆ, ರಾಹುಲ್‌-ಸೋನಿಯಾ ಗಾಂಧಿ, ಕಮಲ್‌ನಾಥ್‌-ದಿಗ್ವಿಜಯ್‌ ಸಿಂಗ್‌ ಅವರೇ ಈ ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ಕಾಂಗ್ರೆಸ್‌ಗೆ ಗಾಂಧಿಯೇತರ ಯುವ ಅಧ್ಯಕ್ಷರ ಆಯ್ಕೆಯಾಗಬೇಕು ಎಂಬ ವಾದ ಕೇಳಿಸಿದಾಗಲೆಲ್ಲ, ಮುಂಚೂಣಿಯಲ್ಲಿ ಇರುತ್ತಿದ್ದ ಹೆಸರೇ ಜ್ಯೋತಿರಾದಿತ್ಯ ಸಿಂಧಿಯಾ ಅವರದ್ದು…

Advertisement

ಸಿಂಧಿಯಾರನ್ನು ಕಡೆಗಣಿಸಿದ ಕಾಂಗ್ರೆಸ್‌
2018ರ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರಲು, ಕಮಲ್‌ನಾಥ್‌ಗಿಂತ ಹೆಚ್ಚು ಶ್ರಮವಹಿಸಿದವರು ಜ್ಯೋತಿರಾದಿತ್ಯ ಸಿಂಧಿಯಾ. ಚುನಾವಣೆ ಗೆದ್ದ ನಂತರ, ಅವರಿಗೆ ಮುಖ್ಯಮಂತ್ರಿಯಾಗುವ ಆಸೆಯೂ ಇತ್ತು. ಇದನ್ನವರು ಹೈಕಮಾಂಡ್‌ ಮುಂದೆ ಹೇಳಿಕೊಂಡಿದ್ದರು. ಆದರೆ ಕಾಂಗ್ರೆಸ್‌ನ ಅಂದಿನ ಅಧ್ಯಕ್ಷ ರಾಹುಲ್‌ ಗಾಂಧಿ, ಕಮಲ್‌ನಾಥ್‌ರನ್ನು ಮುಖ್ಯಮಂತ್ರಿ ಮಾಡಿ ಜ್ಯೋತಿರಾದಿತ್ಯ ಸಿಂಧಿಯಾರನ್ನು ಹಿಂದೆ ತಳ್ಳಿದರು. ಆ ಸಮಯದಲ್ಲಿ ರಾಹುಲ್‌ “ಸಮಯ ಮತ್ತು ಸಂಯಮ ಅತಿದೊಡ್ಡ ಯೋಧರು’ ಎಂದು ಹೇಳಿದ್ದರು. ಆದರೆ, ಅಂದಿನಿಂದಲೇ ಕಮಲ್‌ನಾಥ್‌ ಮತ್ತು ಜ್ಯೋತಿರಾದಿತ್ಯ ನಡುವೆ ಬಿರುಕು ದೊಡ್ಡದಾಗುತ್ತಾ ಸಾಗಿತು.

ಪಕ್ಷ ತೊರೆಯಲು ವರ್ಷದಿಂದಲೇ ತಯ್ನಾರಿ?
ಜ್ಯೋತಿರಾದಿತ್ಯ ಸಿಂಧಿಯಾ 21 ಜನವರಿ 2019ರಂದು ಮಾಜಿ ಸಿಎಂ, ಬಿಜೆಪಿ ನಾಯಕ ಶಿವರಾಜ್‌ ಸಿಂಗ್‌ರನ್ನು ಭೇಟಿಯಾಗಿ ತಡರಾತ್ರಿಯವರೆಗೂ ಮಾತುಕತೆ ನಡೆಸಿದ್ದರು. ಈ ಭೇಟಿಯಂತೂ, ಕಮಲ್‌ನಾಥ್‌ ಸರಕಾರಕ್ಕೆ ನುಂಗಲಾರದ ತುತ್ತಾಯಿತು. ಮಾಧ್ಯಮಗಳು ಈ ವಿಚಾರವಾಗಿ ಪ್ರಶ್ನಿಸಿದಾಗ, ಇದು ಶಿಷ್ಟಾಚಾರದ ಭೇಟಿಯಾಗಿತ್ತಷ್ಟೇ ಎಂದು ಸಿಂಧಿಯಾ ವಾದಿಸಿದ್ದರು. ಒಟ್ಟಲ್ಲಿ, ಆಗಿನಿಂದಲೂ ಸಿಂಧಿಯಾ ಕಮಲ್‌ನಾಥ್‌ ಸರರ್ಕಾರಕ್ಕೆ ಮತ್ತು ಮುಖ್ಯವಾಗಿ ಸೋನಿಯಾ ಹಾಗೂ ರಾಹುಲ್‌ಗೆ ತಮ್ಮನ್ನು ಕಡೆಗಣಿಸದಂತೆ ಪರೋಕ್ಷವಾಗಿ ಎಚ್ಚರಿಕೆ ಕೊಡುತ್ತಲೇ ಇದ್ದರು.

ಜ್ಯೋತಿರಾದಿತ್ಯ ನಿರಂತರವಾಗಿ ಮಧ್ಯಪ್ರದೇಶ ಸರಕಾರದ ವಿರುದ್ಧ ಆಕ್ರಮಣಕಾರಿಯಾಗುತ್ತಾ ಹೋದರು. 2019ರ ಆಗಸ್ಟ್‌ ತಿಂಗಳಲ್ಲಿ ಕೇಂದ್ರ ಸರಕಾರವು ಜಮ್ಮು-ಕಾಶ್ಮೀರದಿಂದ ಆರ್ಟಿಕಲ್‌ 370 ಹಿಂಪಡೆದು, ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕ್ರಮವನ್ನು ಕಾಂಗ್ರೆಸ್‌ ನಾಯಕರು ವಿರೋಧಿಸಿದರೆ, ಜ್ಯೋತಿರಾದಿತ್ಯ ಶ್ಲಾ ಸಿದ್ದರು.

ಇದೇ ವರ್ಷದ ಫೆಬ್ರವರಿಯಲ್ಲಿ ಅವರು “ರಾಜ್ಯ ಸರಕಾರ ಚುನಾವಣಾ ಪೂರ್ವ ಭರವಸೆಗಳನ್ನು ಈಡೇರಿಸಲು ವಿಫ‌ಲವಾಗಿದೆ. ಭರವಸೆ ಈಡೇರಿಸದಿದ್ದರೆ, ರಸ್ತೆಗೆ ಇಳಿಯುತ್ತೇನೆ’ ಎಂದಿದ್ದರು. ಕೆಲವು ದಿನಗಳ ನಂತರ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಬಂದ ಕಮಲ್‌ನಾಥ್‌ಗೆ ಮೀಡಿಯಾದವರು “ಜ್ಯೋತಿರಾದಿತ್ಯ ಸಿಂಧಿಯಾ ರಸ್ತೆಗಿಳಿಯುತ್ತೇನೆ ಎಂದಿದ್ದಾರಲ್ಲ?’ ಎಂದು ಪ್ರಶ್ನಿಸಿದಾಗ, “ಇಳಿಯಲಿ’ ಎಂದಿದ್ದರು ಕಮಲ್‌ನಾಥ್‌. ಈ ಹೇಳಿಕೆಯ ನಂತರ, ಪಕ್ಷದಲ್ಲೇ ವಿಪರೀತ ಅಸಮಾಧಾನ ಹೊರಹೊಮ್ಮಿತ್ತು. ಸಿಂಧಿಯಾ ರಾಜಪರಿವಾರಕ್ಕೆ ಕಮಲ್‌ನಾಥ್‌ ಸರಕಾರ ಅವಮಾನ ಮಾಡುತ್ತಿದೆ ಎಂದೂ ಈ ಸಂಗತಿ ಆಯಾಮ ಪಡೆಯಿತು.

Advertisement

ಎಂದೋ ಬದಲಾಗಿತ್ತು ಟ್ವಿಟರ್‌ ಬಯೋ!
2019ರ ನವೆಂಬರ್‌ 26ರಂದು ಸಿಂಧಿಯಾ ತಮ್ಮ ಟ್ವಿಟರ್‌ ಖಾತೆಯ ಮಾಹಿತಿಯನ್ನು ಬದಲಿಸಿದ್ದರು. ತಮ್ಮ ಬಯೋಡಾಟಾದಿಂದ ಕಾಂಗ್ರೆಸ್‌ ಹೆಸರನ್ನು ಕಿತ್ತೆಸೆದ ಅವರು, ತಮ್ಮನ್ನು ತಾವು ಸಮಾಜಸೇವಕ ಹಾಗೂ ಕ್ರಿಕೆಟ್‌ ಪ್ರೇಮಿ ಎಂದು ಹೇಳಿಕೊಂಡಿದ್ದರು. ಇದಷ್ಟೇ ಅಲ್ಲದೆ ಮಧ್ಯಪ್ರದೇಶದ ಮಾಜಿ ಕ್ರೀಡಾ ಸಚಿವೆ, ಜ್ಯೋತಿರಾದಿತ್ಯ ಅವರ ಚಿಕ್ಕಮ್ಮ ಯಶೋಧರಾ ರಾಜೇ ಕೂಡ, ಕಾಂಗ್ರೆಸ್‌ ತೊರೆಯುವಂತೆ ಜ್ಯೋತಿರಾದಿತ್ಯಗೆ ಸಲಹೆ ನೀಡುತ್ತಾ ಬಂದರು. ಜ್ಯೋತಿರಾದಿತ್ಯ ಬಿಜೆಪಿಗೆ ಬರುವ ವಿಚಾರವನ್ನವರು “ಘರ್‌ ವಾಪಸಿ’ ಎನ್ನುತ್ತಾರೆ! ಇನ್ನು ಜ್ಯೋತಿರಾದಿತ್ಯರ ಮಾವನ ಮನೆಯವರಾದ ಬರೋಡಾ ರಾಜಕುಟುಂಬವೂ ಬಿಜೆಪಿ ಸೇರುವಂತೆ ಅವರ ಮನವೊಲಿಸುತ್ತಲೇ ಬಂದಿದೆ ಎನ್ನಲಾಗುತ್ತದೆ.

ಸಿಂಧಿಯಾ ಆಸೆಗೆ ಬಿದ್ದಿತ್ತು ತಣ್ಣೀರು
ವಿಧಾನಸಭಾ ಚುನಾವಣೆಯ ಅನಂತರವೂ ಸಿಂಧಿಯಾಗೆ ಯಾವುದೇ ಪ್ರಮುಖ ಹುದ್ದೆ ಸಿಗಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಪಕ್ಷದ ಪರವಾಗಿ ಬಹಳ ಪ್ರಚಾರ ಮಾಡಿದ್ದರೂ ಸಿಂಧಿಯಾರನ್ನು ಗಾಂಧಿ ಕುಟುಂಬ ಕಡೆಗಣಿಸಿತು. ಮಧ್ಯಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನವೂ ಅವರ ಕೈಗೆ ಸಿಗದಂತೆ ನೋಡಿಕೊಳ್ಳಲಾಯಿತು. ಇದು ಸಾಲದೆಂಬಂತೆ, ಮಧ್ಯಪ್ರದೇಶದ ಮೂಲಕ ರಾಜ್ಯಸಭೆಗೆ ಪ್ರವೇಶಿಸಬೇಕೆಂಬ ಸಿಂಧಿಯಾರ ಆಸೆಯ ಮೇಲೂ ಕಮಲ್‌ನಾಥ್‌-ದಿಗ್ವಿಜಯ್‌ ಜೋಡಿ ತಣ್ಣೀರೆರಚಿದೆ. ಜ್ಯೋತಿರಾದಿತ್ಯ ಸಿಂಧಿಯಾರ ಬದಲು, ತಮ್ಮ ರಾಜ್ಯದಿಂದ ಪ್ರಿಯಾಂಕಾ ವಾದ್ರಾರನ್ನು ರಾಜ್ಯಸಭೆಗೆ ಕಳುಹಿಸುವ ಯೋಜನೆ ರೂಪಿಸಿತ್ತು.

53 ವರ್ಷದ ಹಿಂದೆ ಸರ್ಕಾರ ಉರುಳಿಸಿದ್ದರು ಅಜ್ಜಿ
ಮಧ್ಯಪ್ರದೇಶದ ರಾಜಕೀಯದಲ್ಲಿ ಸಿಂಧಿಯಾ ಪರಿವಾರ ಮತ್ತೂಮ್ಮೆ ಇತಿಹಾಸವನ್ನು ಪುನರಾವರ್ತಿಸಿದೆ. 1967ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾರ ಅಜ್ಜಿ ವಿಜಯರಾಜೆ ಸಿಂಧಿಯಾ ಅವರಿಂದಾಗಿ ಕಾಂಗ್ರೆಸ್‌ ಸರಕಾರ ಉರುಳಿಹೋಗಿತ್ತು. ಆಗ, ಡಿ.ಪಿ. ಮಿಶ್ರಾ ಕಾಂಗ್ರೆಸ್‌ ಸರಕಾರದ ಮುಖ್ಯಮಂತ್ರಿಯಾಗಿದ್ದರು. ಅದೇ ವರ್ಷದಂದೇ ಮಧ್ಯಪ್ರದೇಶದಲ್ಲಿ ಲೋಕಸಭೆ ಚುನಾವಣೆ ನಡೆಯುವುದಿತ್ತು. ಹೀಗಾಗಿ, ಟಿಕೆಟ್‌ ಹಂಚಿಕೆಯ ವಿಷಯದಲ್ಲಿ ಮಾತನಾಡಲು ವಿಜಯರಾಜೆ, ಪಚಮಡಿ ನಗರದಲ್ಲಿ ನಡೆದ ಕಾಂಗ್ರೆಸ್‌ ಯುವ ಸಮ್ಮೇಳನಕ್ಕೆ ಬಂದಿದ್ದರು. ಈ ವಿಚಾರವನ್ನು ಹಿರಿಯ ಪತ್ರಕರ್ತ ವಿಜಯಧರ್‌ ಸೋಧಾ ನೆನಪು ಮಾಡಿಕೊಳ್ಳುವುದು ಹೀಗೆ, “”ಪಚಮಡಿಯಲ್ಲಿ ಡಿ.ಪಿ. ಮಿಶ್ರಾ ವಿಜಯ ರಾಜೆಯವರನ್ನು 15 ನಿಮಿಷ ಕಾಯಿಸಿದರು. ರಾಜಮಾತೆಗೆ ಇದು ಅವಮಾನದ ವಿಷಯವೆಂದೆನಿಸಿತು. ಮಹಾರಾಣಿಯ ಶಕ್ತಿ ಏನೆಂಬುದನ್ನು ಡಿ.ಪಿ. ಮಿಶ್ರಾಗೆ ತೋರಿಸಲು ವಿಜಯರಾಜೆ ನಿರ್ಧರಿಸಿದರು. ಕೆಲ ಸಮಯದ ನಂತರ ವಿದ್ಯಾರ್ಥಿ ಆಂದೋಲನದ ಮೇಲೆ ಗೋಲಿಬಾರ್‌ ನಡೆಸಿದ್ದನ್ನು ವಿರೋಧಿಸುತ್ತಾ ವಿಜಯರಾಜೆ ಅವರು, ಗ್ವಾಲಿಯರ್‌ನ ಎಸ್‌ಪಿಯನ್ನು ತೆಗೆದುಹಾಕಬೇಕು ಎಂದು ಮಿಶ್ರಾರಲ್ಲಿ ವಿನಂತಿಸಿದರು. ಆದರೆ ಮುಖ್ಯಮಂತ್ರಿ ಮಿಶ್ರಾ ವಿಜಯರಾಜೆಯವರ ಪತ್ರಕ್ಕೆ ಉತ್ತರಿಸಲೂ ಇಲ್ಲ. ಈ ಸಿಟ್ಟೂ ಜತೆಯಾದ್ದರಿಂದ ವಿಜಯರಾಜೆ, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಗುಣಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು. ಚುನಾವಣೆಯ ನಂತರ ಕಾಂಗ್ರೆಸ್‌ನ 36 ಶಾಸಕರೂ ಪಕ್ಷ ತೊರೆದರು. ಇವರಲ್ಲಿ ಗೋವಿಂದ ನಾರಾಯಣ ಸಿಂಗ್‌ ಎನ್ನುವ ನಾಯಕರೂ ಇದ್ದರು. ಇವರು ಹೊರಬಂದು ಲೋಕಸೇವಕ ದಳವನ್ನು ಸ್ಥಾಪಿಸಿದರು. ವಿಜಯರಾಜೆ ಮತ್ತು ತಂಡ ಇವರಿಗೆ ಬೆಂಬಲ ನೀಡಿತು. ತನ್ಮೂಲಕ ಮಧ್ಯಪ್ರದೇಶದಲ್ಲಿ ಮೊದಲ ಕಾಂಗ್ರೆಸ್ಸೇತರ ಸರಕಾರ ಅಧಿಕಾರಕ್ಕೆ ಬಂದಿತ್ತು.

ಹೈಕಮಾಂಡ್‌ ಮೇಲೆ ಯುವನಾಯಕರ ಸಿಟ್ಟು ಕಾಂಗ್ರೆಸ್‌ ಮತ್ತೆ ಬಲವಾಗಬೇಕೆಂದರೆ, ಕಾಂಗ್ರೆಸ್‌
ಹೈಕಮಾಂಡ್‌ನಲ್ಲಿ ಗಾಂಧಿಯೇತರ ಕುಟುಂಬದವರನ್ನು ಅಧ್ಯಕ್ಷರಾಗಿಸಬೇಕು ಎಂಬ ಮಾತು ಕೆಲ ವರ್ಷಗಳಿಂದ ಕೇಳಿಸುತ್ತಿದೆ. ಗಾಂಧಿಯೇತರ ವ್ಯಕ್ತಿ ಎಂದಾಗಲೆಲ್ಲ, ಮೊದಲು ಚರ್ಚೆಗೆ
ಬರಲಾರಂಭಿಸಿದ್ದ ಹೆಸರೇ ಜ್ಯೋತಿರಾದಿತ್ಯ ಸಿಂಧಿಯಾ ಅವರದ್ದು. ಈ ವಿಷಯ ಕಾಂಗ್ರೆಸ್‌ ಹೈಕಮಾಂಡ್‌ಗೆ ಅರಗಿಸಿಕೊಳ್ಳಲು ಕಷ್ಟ ಕೊಡುತ್ತಿತ್ತು. ಕಾಂಗ್ರೆಸ್‌ನಲ್ಲಿ ಯುವ ನಾಯಕರ ಬೆಳವಣಿಗೆಯನ್ನು ರಾಹುಲ್‌ ಗಾಂಧಿಗೆ “ಅಪಾಯ’ ಎಂದೇ ನೋಡಲಾಗುತ್ತಿದೆ ಎಂದು ಸಿಂಧಿಯಾರ ಆಪ್ತರು ದೂರುತ್ತಲೇ ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next