ಭೋಪಾಲ್: ಮಧ್ಯ ಪ್ರದೇಶ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದೆ. ಮತದಾನ ದಿನಾಂಕವನ್ನು ಚುನಾವಣೆ ಆಯೋಗವು ಘೋಷಣೆ ಮಾಡುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆ ಬಿರುಸುಗೊಂಡಿದೆ. ಈತನ್ಮಧ್ಯೆ ಕಾಂಗ್ರೆಸ್ ಇಂದು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪ್ರಸಿದ್ಧ ನಟ, ರಾಮಾಯಣ ನಟ ವಿಕ್ರಮ್ ಮಸ್ತಾಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ವಿಕ್ರಮ್ ಮಸ್ತಾಲ್ ಅವರು 2008ರಲ್ಲಿ ಆನಂದ್ ಸಾಗರ್ ಅವರು ನಿರ್ದೇಶನ ಮಾಡಿದ್ದ ರಾಮಾಯಣ ಧಾರವಾಹಿಯಲ್ಲಿ ಹನುಮಂತನ ಪಾತ್ರದಿಂದ ಪ್ರಸಿದ್ಧರಾಗಿದ್ದರು.
ನಟ ವಿಕ್ರಮ್ ಮಸ್ತಾಲ್ ಅವರು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ವಿರುದ್ಧ ಬುಧ್ನಿ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಲಿದ್ದಾರೆ.
ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಪ್ರಕಟಿಸಿದೆ.
ಮಧ್ಯಪ್ರದೇಶದಲ್ಲಿ ಚಿಂದ್ವಾರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಮತ್ತು ಪಿಸಿಸಿ ಮುಖ್ಯಸ್ಥ ಕಮಲ್ ನಾಥ್ ಅವರನ್ನು ಕಣಕ್ಕಿಳಿಸಿತು. ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರ ಪುತ್ರ ಜೈವರ್ಧನ್ ಸಿಂಗ್ ಅವರು ರಘೀಗತ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಕಳೆದ ಕಮಲ್ ನಾಥ್ ಸರ್ಕಾರದಲ್ಲಿ ಅವರು ಸಚಿವರಾಗಿದ್ದರು.
ಪಟ್ಟಿಯಲ್ಲಿ ಸಾಮಾನ್ಯ ವರ್ಗದಿಂದ 47, ಒಬಿಸಿ ವರ್ಗದಿಂದ 39, ಎಸ್‌ಟಿ ವರ್ಗದಿಂದ 30, ಎಸ್‌ಸಿ ವರ್ಗದಿಂದ 22, ಒಬ್ಬ ಮುಸ್ಲಿಂ ಮತ್ತು 19 ಮಹಿಳೆಯರು ಸೇರಿದ್ದಾರೆ. ಅರವತ್ತೈದು ಅಭ್ಯರ್ಥಿಗಳು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.