ಪುಂಜಾಲಕಟ್ಟೆ: ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಮಧ್ವ ಎಂಬಲ್ಲಿ ಫೆ. 1ರಂದು ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಹಾಗೂ ಮಗು ಗಾಯಗೊಂಡು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಾರು ಚಾಲಕ ಪಡಂಗಡಿಯ ಇಶಾìದ್ ಹಾಗೂ ಪತ್ನಿ ಶಾಖಿರಾ ಮತ್ತು ಎರಡು ವರ್ಷದ ಮಗು ಗಾಯಗೊಂಡಿದ್ದರು.
ಈ ಅಪಘಾತದಲ್ಲಿ ಬೈಕ್ ಸವಾರ ತಾಲೂಕಿನ ಲಾಯಿಲ ಗ್ರಾಮದ ಕೆಳಗಿನ ಕೊಪ್ಪ ನಿವಾಸಿ ರಮೇಶ್ ಶೆಟ್ಟಿ ಅವರ ದ್ವಿತೀಯ ಪುತ್ರ ಪ್ರದೀಶ್ ಶೆಟ್ಟಿ (27) ಮೃತಪಟ್ಟಿದ್ದರು.
ಅಪಘಾತದ ಪರಿಣಾಮ ತೀವ್ರ ಸ್ವರೂಪವಾಗಿ ಗಾಯಗೊಂಡಿದ್ದ ಪ್ರದೀಶ್ ಅವರು ಆಸ್ಪತ್ರೆ ದಾರಿ ಮಧ್ಯೆ ಮೃತಪಟ್ಟಿದ್ದರು.
ಮೃತರು ಬೆಳ್ತಂಗಡಿಯಲ್ಲಿ ಖಾಸಗಿ ಹಣಕಾಸು ಸಂಸ್ಥೆಯ ಉದ್ಯೋಗಿಯಾಗಿದ್ದು, ಕಾರ್ಯ ನಿಮಿತ್ತ ಮಂಗಳೂರಿಗೆ ತೆರಳಿ ಬೆಳ್ತಂಗಡಿಗೆ ವಾಪಸಾಗುತ್ತಿದ್ದರು.
ರಮೇಶ್ ಅವರ ಇಬ್ಬರು ಪುತ್ರರಲ್ಲಿ ಪ್ರದೀಶ್ ಕಿರಿಯವರಾಗಿದ್ದರು. ಅವರ ತಾಯಿ ಪ್ರೇಮಾ ಬೆಳ್ತಂಗಡಿ ಗ್ರಂಥಾಲಯ ಸಿಬಂದಿಯಾಗಿದ್ದು, ತಂದೆ ಕೊಯ್ಯೂರು ಕ್ರಾಸ್ ಬಳಿ ಗ್ಯಾರೇಜ್ ನಡೆಸುತ್ತಿದ್ದಾರೆ. ಅಣ್ಣ ಪ್ರಾಣೇಶ್ ತಂದೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಯಾತ್ರೆಗೆ ಹೊರಟಿದ್ದರು
ಅಪಘಾತದ ಹಿಂದಿನ ದಿನವಷ್ಟೇ ಅವರ ಹೆತ್ತವರು ಅಯೋಧ್ಯೆ ಹಾಗೂ ಕಾಶಿ ಯಾತ್ರೆಗೆಂದು ಹೊರಟಿದ್ದರು. ಅಯೋಧ್ಯೆ ತಲುಪುವಷ್ಟರಲ್ಲಿ ಮಗನ ಅಪಘಾತದ ಸುದ್ದಿ ತಿಳಿದು ಊರಿಗೆ ಹಿಂದಿರುಗಿದ್ದರು. ಆ ಬಳಿಕ ಅಂತ್ಯಸಂಸ್ಕಾರ ಕ್ರಿಯೆ ನಡೆಸ ಲಾಯಿತು. ಅವಿವಾಹಿತರಾಗಿದ್ದ ಪ್ರದೀಶ್ ಸ್ನೇಹಜೀವಿಯಾಗಿದ್ದರು.