Advertisement

ಮನೆಗೆ ಬರುತ್ತೇನೆಂದ ಸೋಮಣ್ಣಗೆ “ಬರಬೇಡಿ’ ಎಂದ ಮಾಧುಸ್ವಾಮಿ!

11:45 PM Mar 15, 2024 | Team Udayavani |

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಟಿಕೆಟ್‌ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡಿರುವ ಮಾಧುಸ್ವಾಮಿ, ತಮ್ಮ ಭೇಟಿಗೆ ಮುಂದಾಗಿದ್ದ ವಿ.ಸೋಮಣ್ಣ ಅವರನ್ನೇ ಮನೆಗೆ ಬರಬೇಡಿ ಎಂದು ಹೇಳುವ ಮೂಲಕ ಬಿಜೆಪಿ ವರಿಷ್ಠರ ಮೇಲೆ ಮುನಿಸು ತೋರಿಸಿದ್ದಾರೆ.

Advertisement

ಟಿಕೆಟ್‌ ಘೋಷಣೆಗೂ ಮುನ್ನ ಮಾಧುಸ್ವಾಮಿ ಬೆಂಬಲಿಗರು “ಗೋ ಬ್ಯಾಕ್‌ ಸೋಮಣ್ಣ’ ಅಭಿಯಾನ ಆರಂಭಿಸಿದ್ದರು. ಆದರೂ ವರಿಷ್ಠರು ಸೋಮಣ್ಣಗೇ ಟಿಕೆಟ್‌ ಸಿಕ್ಕಿರುವುದು ಮಾಧುಸ್ವಾಮಿ ಆಕ್ರೋಶಕ್ಕೆ ಕಾರಣವಾಗಿದೆ. ಅಪ್ಪ ಮಕ್ಕಳ ಅಸ್ತಿತ್ವಕ್ಕಾಗಿ ಏನೇನೋ ಮಾಡಬಾರದು. ಸೋಮಣ್ಣ ಗೆಲ್ಲುವುದು ಸಂಸದ ಬಸವರಾಜು ಹಾಗೂ ನನಗೂ ಇಷ್ಟವಿಲ್ಲ. ಎಂದು ಮಾಧುಸ್ವಾಮಿ ಹೇಳಿದ್ದಾರೆ.

ಈ ನಡುವೆ ಇಡೀ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ವಿ.ಸೋಮಣ್ಣ, ಮಾಧುಸ್ವಾಮಿ ಮನೆಗೆ ಬರುತ್ತೇನೆಂದು ದೂರವಾಣಿ ಮೂಲಕ ತಿಳಿಸಿದೆ. ಅವರು ನಮ್ಮ ಮನೆಗೆ ಬರುವುದು ಬೇಡ ಎಂದು ಹೇಳಿದರು. ಮುಂದೆ ಎಲ್ಲ ಸರಿಹೋಗುತ್ತದೆ ಎಂಬ ವಿಶ್ವಾಸ ಇದೆ ಎಂದು ಸೋಮಣ್ಣ ತಿಳಿಸಿದರು.

ಸೋಮಣ್ಣ ಪರ ಪ್ರಚಾರ ಮಾಡಲಾರೆ: ಮಾಧುಸ್ವಾಮಿ
ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ನಾನು ಯಾವುದೇ ಕಾರಣಕ್ಕೂ ಪ್ರಚಾರ ಮಾಡುವುದಿಲ್ಲ. ಮನೆಯಲ್ಲಿ ಕುಳಿತ ನನಗೆ ಲೋಕಸಭೆ ಟಿಕೆಟ್‌ ಕೊಡುತ್ತೇನೆಂದು ಹೇಳಿ ಕೊನೇ ಕ್ಷಣದಲ್ಲಿ ಬಿ.ಎಸ್‌.ಯಡಿಯೂರಪ್ಪನವರು ಕೈಕೊಟ್ಟರು. ಆದರೂ ಬಿಜೆಪಿ ಬಿಡುವ ತೀರ್ಮಾನ ಮಾಡಿಲ್ಲ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಎಂದೂ ಲೋಕಸಭೆ ಟಿಕೆಟ್‌ ಕೊಡಿ ಎಂದು ಕೇಳಿಲ್ಲ. ಯಡಿಯೂರಪ್ಪನವರು ಮನೆಗೆ ಕರೆಸಿಕೊಂಡು ನಿನಗೆ ಬಿ ಫಾರಂ ಕೊಡುತ್ತೇನೆ, ಚುನಾವಣೆ ತಯಾರಿ ಮಾಡಿಕೋ ಎಂಬ ಭರವಸೆ ನೀಡಿದ್ದರು. ಆದರೆ ಮಾತು ಉಳಿಸಿಕೊಳ್ಳಲಿಲ್ಲ. ಇದರಿಂದ ನನಗೆ ನೋವಾಗಿದೆ ಎಂದರು.

Advertisement

ಸೋಮಣ್ಣನಿಗೆ ಬೆಂಬಲವಿಲ್ಲ
ನಾನು ಸ್ಪಷ್ಟವಾಗಿ ಹೇಳುತ್ತೇನೆ. ವಿ.ಸೋಮಣ್ಣನಿಗೆ ಈ ಚುನಾವಣೆಯಲ್ಲಿ ಬೆಂಬಲ ನೀಡುವುದಿಲ್ಲ. ಹೊರಗಿನವರು ಬಂದು ನಮ್ಮ ಜಿಲ್ಲೆಯಲ್ಲಿ ಆಡಳಿತ ಮಾಡಲು ಅವಕಾಶ ಕೊಡಲು ನಾವು ಸಿದ್ಧವಿಲ್ಲ ಎಂದರು.

ಮನೆಗೆ ಬರಬೇಡ ಎಂದಿಲ್ಲ
ನನಗೆ ಮನಸ್ಸು ಸರಿಯಿಲ್ಲ, ಕೋಪದಲ್ಲಿ ಮಾತನಾಡುವುದು ಬೇಡ. ಸ್ವಲ್ಪ ದಿನಗಳು ಕಳೆಯಲಿ, ಅನಂತರ ಮಾತನಾಡೋಣ ಎಂದು ಸೋಮಣ್ಣನಿಗೆ ಹೇಳಿದ್ದು ನಿಜ. ಆದರೆ ಮನೆಗೆ ಬರುವುದೇ ಬೇಡ ಎಂದು ಹೇಳಿಲ್ಲ. ನನ್ನ ಮನೆ ಎಲ್ಲರಿಗೂ ತೆರೆದಿರುತ್ತದೆ ಎಂದು ಮಾಧುಸ್ವಾಮಿ ಹೇಳಿದರು.

ತುಮಕೂರು ಲೋಕಸಭಾ ಕ್ಷೇತ್ರವನ್ನು ನಾನು ಬಯಸಿರಲಿಲ್ಲ. ಅದು ವಿಧಿ ಲಿಖಿತ. ವರಿಷ್ಠರು ನನಗೆ ಇಲ್ಲಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಕ್ಷೇತ್ರದ ಜನರು ನನಗೆ ಅವಕಾಶ ಕೊಟ್ಟರೆ ತುಮಕೂರನ್ನು ಮತ್ತೊಂದು ವಾರಾಣಸಿ ಮಾಡಬೇಕೆಂಬ ಕನಸಿದೆ.
-ವಿ.ಸೋಮಣ್ಣ, ತುಮಕೂರು ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next