ಮಧುಗಿರಿ: ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡುವಂತೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಬರೆದ ಪತ್ರ ಕ್ಷೇತ್ರದಲ್ಲಿ ಹಲವು ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಮತ್ತೆ ಮಧುಗಿರಿ ಕಡೆ ಮುಖ ಮಾಡ್ತಾರಾ ಎಂಬ ಪ್ರಶ್ನೆ ಉದ್ಭವವಾಗಿದೆ.
Advertisement
ಮಧುಗಿರಿ ತಾಲೂಕು ಸ್ವತಂತ್ರ ಪೂರ್ವದಲ್ಲೇ ಉಪವಿಭಾಗವಾಗಿದ್ದು, ಈಗಾಗಲೇ ಶೈಕ್ಷಣಿಕ, ಲೋಕೋಪಯೋಗಿ, ಜಿ.ಪಂ., ಎ.ಆರ್.ಟಿ.ಒ ಹಾಗೂ ಕಂದಾಯ ಉಪ ವಿಭಾಗವಾಗಿದೆ. ಆದರೆ ಈ ಉಪ ವಿಭಾಗವು ಜಿಲ್ಲಾ ಕೇಂದ್ರ ಆಗುವ ಕೂಗು ಕಳೆದ ದಶಕದಿಂದಲೂ ಕೇಳಿ ಬರುತ್ತಿದೆ. ಇದಕ್ಕೆ ಮಾಜಿ ಶಾಸಕ ಕೆ.ಎನ್. ರಾಜಣ್ಣ, ಹಾಲಿ ಶಾಸಕ ಎಂ.ವಿ. ವೀರಭದ್ರಯ್ಯನವರೂ ಸಹಮತ ವ್ಯಕ್ತ ಪಡಿಸಿದ್ದರು.
ಇದೇ ವಿಷಯ ಅಸ್ತ್ರವಾಗಿ ಬಳಸಿ ಎಂ.ವಿ. ವೀರಭದ್ರಯ್ಯ ಶಾಸಕರಾಗಿ ಆಯ್ಕೆಯಾದರು. ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಮಧುಗಿರಿಯನ್ನು ಜಿಲ್ಲಾ ಕೇಂದ್ರವಾಗಿಸುವ ಭರವಸೆ ನೀಡಿದ್ದರು. ಅದರಂತೆ ಮೊದಲ ಬಜೆಟ್ ನಲ್ಲಿ ಕೈಗಾರಿಕಾ ವಲಯ ಮಂಜೂರು ಮಾಡಿಸಿ ಉದ್ಯೋಗ ಕಲ್ಪಿಸಿದ್ದರು. ವರ್ಷದ ಬಳಿಕ ಅಧಿಕಾರ ಕಳೆದು ಕೊಂಡಿದ್ದರಿಂದ ವಿಷಯ ನೇಪಥ್ಯಕ್ಕೆ ಸರಿಯಿತು. ಅಧಿಕಾರ ಇದ್ದಾಗ ಮಾತಿಲ್ಲ: ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಡಾ.ಜಿ. ಪರಮೇಶ್ವರ್ ಅಧಿಕಾರ ಇದ್ದಾಗ ಮಾಡದ ಹಾಗೂ ಯೋಚನೆಯೂ ಮಾಡದ ಜಿಲ್ಲಾ ಕೇಂದ್ರದ ವಿಚಾರವನ್ನು ಅಧಿಕಾರದಿಂದ ಕೆಳಗಿಳಿದ ನಂತರ ಬಿಜೆಪಿ ಸರ್ಕಾರಕ್ಕೆ ಪತ್ರ ಬರೆದಿರುವುದು ಸಾರ್ವಜನಿಕ ವಲಯದಲ್ಲಿ ಆಶ್ಚರ್ಯ, ಸಿಟ್ಟಿಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲೂ ವಿಷಯ ವೈರಲ್ ಆಗಿದ್ದು, ಅಧಿಕಾರ ಇದ್ದಾಗ ತುಟಿ ಬಿಚ್ಚದ ಪರಮೇಶ್ವರ್, ಈಗ ಜಿಲ್ಲಾ ಕೇಂದ್ರಕ್ಕೆ ಒತ್ತಾಯಿಸಿ ಪತ್ರ ಬರೆಯುವ ರಾಜಕೀಯ ಏಕೆ ಮಾಡಬೇಕು. ನೀವು ಕೊರಟಗೆರೆಗೆ ಶಾಸಕರಾಗಿದ್ದು, ಹಿಂದೆ ಮಧು ಗಿರಿಯ ಶಾಸಕರಾಗಿದ್ದೀರಿ. ಗೃಹಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರೂ ಮಧುಗಿರಿ, ಸ್ವತಃ ಕೊರಟಗೆರೆಯ ರಸ್ತೆಗಳ ಅಭಿವೃದ್ಧಿ
ಬಗ್ಗೆಯೂ ಚಿಂತನೆ ನಡೆಸಲಿಲ್ಲ. ಈಗ ದಿಢೀರನೆ ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡಿ ಎಂದು ಪತ್ರ ಬರೆದು ಒತ್ತಾಯಿಸುವುದರ ಮರ್ಮವೇನು ನೆಟ್ಟಿಗರು ತರಾಟೆಗೆ ತಗೆದುಕೊಂಡಿದ್ದರು.
Related Articles
ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಯೋಚನೆ ಮಾಡಲಿಲ್ಲ. ಈಗ ಅಧಿಕಾರ ಕಳೆದುಕೊಂಡು ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡುವಂತೆ ಬೊಬ್ಬೆ ಹೊಡೆಯುವುದು ಯಾವ ರಾಜಕೀಯ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಕುಟುಕಿದ್ದಾರೆ. ಮಧುಗಿರಿ ಜಿಲ್ಲಾ ಕೇಂದ್ರಕ್ಕೆ ಅರ್ಹ ಕ್ಷೇತ್ರವಾಗಿದ್ದು, ಅವರ ಸಹಕಾರ ಅಗತ್ಯ ಎಂದು ಶಾಸಕ ಎಂ.ವಿ. ವೀರಭದ್ರಯ್ಯ ಹೇಳುವ ಮೂಲಕ ಪರಂ
ಹೇಳಿಕೆ ಸ್ವಾಗತಿಸಿದ್ದಾರೆ. ಶಿರಾ, ಕೊರಟಗೆರೆ, ಪಾವಗಡ ತಾಲೂಕು ಈಗಾಗಲೇ ಮಧುಗಿರಿ ಉಪವಿಭಾಗದಲ್ಲಿ ಸೇರಿದ್ದು, ಶಿರಾ ಶಾಸಕ
ಬಿ. ಸತ್ಯನಾರಾಯಣ ವಿರೋಧ ವ್ಯಕ್ತಪಡಿಸಿದ್ದಾರೆ. ಪರಮೇಶ್ವರ್ ಬರೆದಿರುವ ಪತ್ರದಿಂದ ಮಧುಗಿರಿ ಜಿಲ್ಲಾ ಕೇಂದ್ರವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
Advertisement