ಮಧುಗಿರಿ: ಉದ್ಯೋಗಕ್ಕಾಗಿ ಫ್ಯಾಕ್ಟರಿಗೆ ಹೊರಟಿದ್ದ ಗಾರ್ಮೆಂಟ್ಸ್ ನೌಕರರು ತುಂಬಿದ್ದ ಆಟೋ ಹಾಗೂ ಸಾರಿಗೆ ಬಸ್ ಡಿಕ್ಕಿಯಾಗಿ ಆಟೋದಲ್ಲಿದ್ದ ಓರ್ವ ಯುವತಿ ಮೃತಪಟ್ಟು 10 ಮಹಿಳಾ ಉದ್ಯೋಗಿಗಳು ಗಾಯಗೊಂಡಿರುವ ಘಟನೆ ಆ. 8 ರ ಮಂಗಳವಾರ ನಡೆದಿದೆ.
ತಾಲೂಕಿನ ಕೊಡಿಗೇನಗಳ್ಳಿ- ಗುಟ್ಟೆ ಬಳಿಯ ಜಯಮಂಗಳಿ ನದಿ ಸೇತುವೆ ಬಳಿ ಅಪಘಾತ ಸಂಭವಿಸಿದ್ದು, ಮೃತ ಯುವತಿ ಜೋಗೆನಹಳ್ಳಿ ವಾಸಿ ಲಕ್ಷ್ಮೀ ( 20) ಎಂದು ಗುರುತಿಸಲಾಗಿದೆ.
ಹೋಬಳಿಯ ಸಿಂಗನಹಳ್ಳಿ, ಸುದ್ದೆಕುಂಟೆ, ಅಡವಿನಾಗೇನಹಳ್ಳಿ, ಜೋಗೇನಹಳ್ಳಿ, ಹಾಗೂ ಗುಟ್ಟೆ ಭಾಗದಿಂದ ಮಹಿಳೆಯರು ಕೆಲಸ ಅರಸಿ ಗೌರಿಬಿದನೂರು ಬಳಿಯ ಗಾರ್ಮೆಂಟ್ ಕಂಪನಿಗೆ ಕೆಲಸಕ್ಕಾಗಿ ಹೋಗುತ್ತಾರೆ. ಈ ಭಾಗದಲ್ಲಿ ಉತ್ತಮ ಸಾರಿಗೆ ವ್ಯವಸ್ಥೆ ಇಲ್ಲ. ಉದ್ಯೋಗ ಮಾಡಲು ಯಾವುದೇ ಕೈಗಾರಿಕೆಗಳು ಇಲ್ಲದ ಕಾರಣ ಕೆಲಸ ಮಾಡಲು ನೆರೆಯ ತಾಲೂಕಿಗೆ ತೆರಳಬೇಕಾಗಿದೆ. ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಾರಣ ಅನಿವಾರ್ಯವಾಗಿ ಆಟೋದಲ್ಲಿ ಸಂಚರಿಸಬೇಕಾಗಿದ್ದು, ಇಂತಹ ಅವಘಡಗಳು ನಡೆಯುತ್ತಿದೆ.
ಸುದ್ದಿ ತಿಳಿದ ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಪರಿಷತ್ ಸದಸ್ಯ ಆರ್. ರಾಜೇಂದ್ರ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಗಂಭೀರವಾಗಿ ಗಾಯಗೊಂಡ 8 ಮಹಿಳೆಯರನ್ನು ಜಿಲ್ಲಾಸ್ಪತ್ರೆಗೆ ಕಳಿಸಿದ್ದು, ಮೃತ ಮಹಿಳೆಯ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಅತೀ ಶೀಘ್ರದಲ್ಲಿ ಈ ಭಾಗಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ ಹಾಗೂ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ದೊರಕಿಸಿಕೊಡ ಬೇಕೆಂದು ಸ್ಥಳದಲ್ಲಿದ್ದ ಮಹಿಳೆಯರು ಎಂಎಲ್ಸಿಗೆ ಒತ್ತಾಯಿಸಿದರು.