ಸೊರಬ: ಅಧಿಕಾರ ಇರಲಿ, ಇರದಿರಲಿ ಜನತೆಯೊಂದಿಗೆ ಸದಾ ಕಷ್ಟ- ಸುಖಗಳಲ್ಲಿ ಭಾಗಿಯಾಗುವ ಮಧು ಬಂಗಾರಪ್ಪ ಅವರನ್ನು ತಾಲೂಕಿನ ಅಭಿವೃದ್ಧಿಗಾಗಿ ಆಯ್ಕೆ ಮಾಡಿ ಎಂದು ಗೀತಾ ಶಿವರಾಜ್‌ಕುಮಾರ್ ಮನವಿ ಮಾಡಿದರು. ತಾಲೂಕಿನ ಇಂಡುವಳ್ಳಿ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಮತ ಯಾಚಿಸಿ ಅವರು ಮಾತನಾಡಿದರು.
ತಂದೆ ಎಸ್. ಬಂಗಾರಪ್ಪ ಅವರನ್ನು ನಾಲ್ಕೈದು ದಶಕಗಳ ಕಾಲ ಅಧಿ ಕಾರ ನೀಡಿ ರಾಜ್ಯದ ಉನ್ನತ ಹುದ್ದೆ ನಿಭಾಯಿಸುವಲ್ಲಿ ತಾಲೂಕಿನ ಜನತೆ ಶಕ್ತಿ ನೀಡಿರುವುದನ್ನು ನಮ್ಮ ಕುಟುಂಬ ಎಂದಿಗೂ ಮರೆಯುವುದಿಲ್ಲ. ತಂದೆಯಂತೆಯೇ ಆದರ್ಶದ ರಾಜಕಾರಣಿಯಾಗಿರುವ ಮಧು ಬಂಗಾರಪ್ಪ ಅವರಿಗೆ ಈ ಬಾರಿಯೂ ಆಶೀರ್ವದಿಸಬೇಕು ಎಂದರು.
ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದು ನಿಶ್ಚಿತವಾಗಿದೆ. ಅವರ ಮಂತ್ರಿಮಂಡಲದಲ್ಲಿ ಮಧು ಬಂಗಾರಪ್ಪ ಮಂತ್ರಿಯಾಗುತ್ತಾರೆ. ಆಗ ತಾಲೂಕಿನ ಅಭಿವೃದ್ಧಿ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ. ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಹಾಗೂ ಸ್ತ್ರೀಶಕ್ತಿ ಸ್ವಸಾಯ ಸಂಘಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು.
ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಪಾದಯಾತ್ರೆ ನಡೆಸಿ ಅತಿ ಹೆಚ್ಚು ಹಕ್ಕುಪತ್ರ ನೀಡುವಳ್ಳಿ ಯಶಸ್ವಿಯಾಗಿರುವ ಮಧು ಬಂಗಾರಪ್ಪ ಅವರು ಮತ್ತೂಮ್ಮೆ ತಾಲೂಕಿನ ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಂಡಿದ್ದರ ಫಲವಾಗಿ ಕಚವಿ ಏತ ನೀರಾವರಿ ಯೋಜನೆಗೆ ಅನುಮೋದನೆ ದೊರೆತು ಕಾಮಗಾರಿ ಪ್ರಾರಂಭಗೊಂಡಿದೆ ಎಂದರು.
ಶಾಸಕ ಮಧು ಬಂಗಾರಪ್ಪ ಮಾತನಾಡಿ, ಐದು ವರ್ಷದ ಅಧಿಕಾರಾವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಈ ಬಾರಿ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ತಾಲೂಕಿನ ಮತದಾರರು ಜಾತಿ ಭೇದ ಮರೆತು ಕನಿಷ್ಟ 40 ಸಾವಿರ ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ವಕ್ತಾರ ಎಂ.ಡಿ. ಶೇಖರ್, ಜಿಪಂ ಸದಸ್ಯೆ ತಾರಾ ಶಿವಾನಂದಪ್ಪ, ಎಪಿಎಂಸಿ ಅಧ್ಯಕ್ಷ ರಾಜಶೇಖರ್ ಕುಪ್ಪಗಡ್ಡೆ, ತಾಪಂ ಸದಸ್ಯೆ ಶಾಂತಮ್ಮ ಉಳವಿ, ಕುಪ್ಪೆ ಜಗದೀಶ್, ಸೋಮಪ್ಪ, ಪ್ರಭಾಕರ ಶಿಗ್ಗಾ ಮತ್ತಿತರರು ಇದ್ದರು.