ಶಿವಮೊಗ್ಗ: ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ ಕುರಿತು ಮಾಜಿ ಶಾಸಕ ಮಧು ಬಂಗಾರಪ್ಪ ಕೊನೆಗೂ ಮೌನ ಮುರಿದಿದ್ದಾರೆ. ರಾಜಕೀಯ ಬದಲಾವಣೆಗೆ ಮುಂದಾಗಿರುವ ಬಗ್ಗೆ ಮಾತನಾಡಿದ್ದು ಸಮಯವನ್ನು ನಿಗದಿಪಡಿಸಿಕೊಂಡಿದ್ದಾರೆ.
ಶಿವಮೊಗ್ಗದ ಕಲ್ಲಹಳ್ಳಿಯ ನಿವಾಸದಲ್ಲಿ ಮಂಗಳವಾರ ತಮ್ಮ ಜನುಮದಿನ ಆಚರಿಸಿಕೊಂಡ ಮಧು ಬಂಗಾರಪ್ಪ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ರಾಜಕೀಯ ಬದಲಾವಣೆಗಳು ಶಿವಮೊಗ್ಗದಲ್ಲಿಯೇ ಆಗಲಿದೆ ಎಂದರು.
ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ಹಿತೈಷಿಗಳು, ಕಾರ್ಯಕರ್ತರ ಜೊತೆ ಚರ್ಚೆ ಮಾಡಬೇಕಿದೆ. ಜಿಲ್ಲಾ ಪಂಚಾಯಿತಿ ಚುನಾವಣೆಯೊಳಗೆ ನಿರ್ಧಾರ ಪ್ರಕಟಿಸುತ್ತೇನೆ. ನಾನಿನ್ನೂ ಜೆಡಿಎಸ್ ಪಕ್ಷದಲ್ಲೇ ಇದ್ದೇನೆ. ಕುಮಾರಸ್ವಾಮಿ ಅವರು ರಾಜಕೀಯವಾಗಿ ಬೆಳೆಸಿದ್ದಾರೆ. ಅವರನ್ನು ಹೆಚ್ಚು ಪ್ರೀತಿಸುತ್ತೇನೆ. ಹೀಗಾಗಿ ಜೆಡಿಎಸ್ ಬಿಟ್ಟು ಬರುವ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುತ್ತಿದೆ ಎಂದರು.
ಜೆಡಿಎಸ್ ಪಕ್ಷದಲ್ಲಿ ತಮಗೇನೂ ಸಮಸ್ಯೆ ಆಗಿಲ್ಲ. ಆದರೆ ಕಾರ್ಯಕರ್ತರಿಗೆ ಅಧಿಕಾರ ಸಿಗಲಿಲ್ಲ. ಶಿವಮೊಗ್ಗದ ಉದಾಹರಣೆ ಹೇಳುವುದಾದರೆ ಶ್ರೀಕಾಂತ್ ಅವರಿಗೆ ಅಧಿ ಕಾರ ಕೊಡಬಹುದಾಗಿತ್ತು. ಆದರೆ ಹಾಗಾಗಲಿಲ್ಲ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಗೆಲುವು ಸಾ ಧಿಸಿದ ವೇದಾ ವಿಜಯಕುಮಾರ್ ಅವರಿಗೆ ಕೆಲವು ಮಾತು ಕೊಟ್ಟು ಬೆಂಬಲ ಪಡೆದುಕೊಳ್ಳಲಾಯಿತು. ಆದರೆ ಈತನಕ ಆ ಭರವಸೆ ಈಡೇರಿಸಲು ಆಗಲಿಲ್ಲ ಎಂದರು.
ಮಧು ಬಂಗಾರಪ್ಪ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಕಾಂಗ್ರೆಸ್ ಮುಖಂಡರೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ವಿಜಯ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್, ಎನ್.ರಮೇಶ್, ಎಸ್.ಪಿ.ದಿನೇಶ್ ಸೇರಿದಂತೆ ಹಲವರು ಇದ್ದರು.