Advertisement

ಮುಖಂಡರು-ಹಿರಿಯರ ಸಲಹೆ ಮೇರೆಗೆ ಕೈ ಸೇರ್ಪಡೆ

08:38 PM Mar 16, 2021 | Girisha |

ಸೊರಬ : ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರು ವೈಯಕ್ತಿಕವಾಗಿ ತೀರ್ಮಾನ ತಗೆದುಕೊಂಡು ಸಾಕಷ್ಟು ಪಕ್ಷಗಳನ್ನು ಬದಲಾಯಿಸಿದ್ದಾರೆ. ಆದರೆ ಎಸ್‌. ಬಂಗಾರಪ್ಪ ಅವರು ಇಲ್ಲದ ಸಂದರ್ಭದಲ್ಲಿ ಮುಖಂಡರು ಹಾಗೂ ಹಿರಿಯರ ಸಲಹೆಗಳನ್ನು ಪಡೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದೇನೆ ಎಂದು ಮಾಜಿ ಶಾಸಕ ಎಸ್‌. ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.

Advertisement

ಪಟ್ಟಣದ ಬಂಗಾರ ಧಾಮದಲ್ಲಿ ಸೋಮವಾರ ತಾಲೂಕು ಕಾಂಗ್ರೆಸ್‌ನಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ತಾವು ಕಾಂಗ್ರೆಸ್‌ ಸೇರ್ಪಡೆಯ ಕುರಿತು ದೆಹಲಿ ಮಟ್ಟದಲ್ಲಿ ಎರಡು ತಿಂಗಳ ಹಿಂದೆಯೇ ಮಾತುಕತೆಯಾಗಿತ್ತು. ಇತ್ತೀಚೆಗೆ ಬೆಂಗಳೂರಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿ ಪಕ್ಷ ಸೇರ್ಪಡೆಗೊಂಡು ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದರು.

ಏಪ್ರಿಲ್‌ ಎರಡನೇ ವಾರದಲ್ಲಿ ಶಿವಮೊಗ್ಗದಲ್ಲಿ ಬೃಹತ್‌ ಸಮಾವೇಶದ ಮೂಲಕ ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿಳಿಸಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಂದು ನಡೆಯುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ರಾಷ್ಟ್ರಮಟ್ಟದ ನಾಯಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಅನೇಕ ಮುಖಂಡರು ಜೆಡಿಎಸ್‌ ಮಾತ್ರವಲ್ಲ, ಬಿಜೆಪಿಯಿಂದಲೂ ಕಾಂಗ್ರೆಸ್‌ ಸೇರ್ಪಡೆಯಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದರು.

ಮಾಜಿ ಸಿಎಂ ಎಚ್‌.ಡಿ. ಕುಮಾರ ಸ್ವಾಮಿ ಅವರ ಬಗ್ಗೆ ಈಗಲೂ ಗೌರವವಿದೆ. ತಾವು ಶಾಸಕರಲ್ಲದಿದ್ದ ಸಂದರ್ಭದಲ್ಲಿ ತಾಲೂಕಿನ ಬಹು ನಿರೀಕ್ಷಿತ ಯೋಜನೆಗಳಾದ ಮೂಡಿ ಮತ್ತು ಮೂಗೂರು ಏತ ನೀರಾವರಿ ಯೋಜನೆಗಳಿಗೆ ಸಮ್ಮಿಶ್ರ ಸರ್ಕಾರದ ಅವ ಧಿಯಲ್ಲಿ ಬಜೆಟ್‌ನಲ್ಲಿ ಅನುದಾನವನ್ನು ಮೀಸಲಿಟ್ಟಿದ್ದರು. ಹಾಯಾ, ಗುಡುವಿ, ಹಲಸಿನಕೊಪ್ಪ ಸೇತುವೆಗಳಿಗೆ ಮಂಜೂರಾತಿ ಮಾಡಿ ಅನುದಾನ ಬಿಡುಗಡೆ ಮಾಡಿದ್ದರು. ಈ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಮಾಡುತ್ತೇನೆ. ಜೆಡಿಎಸ್‌ ಅಧಿ ಕಾರದಲ್ಲಿದ್ದಾಗ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. ಕಳೆದ 10 ವರ್ಷದಿಂದ ಜೆಡಿಎಸ್‌ನಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಪಕ್ಷ ಸಂಘಟನೆಯ ಕಾರ್ಯ ನಿರ್ವಹಿಸಿದ್ದೇನೆ. ಪಕ್ಷವು ಸಹ ರಾಜ್ಯಮಟ್ಟದಲ್ಲಿ ನನ್ನನ್ನು ಗುರುತಿಸುವಂತೆ ಮಾಡಿದೆ. ಆದರೆ, ಅ ಧಿಕಾರಕ್ಕೆ ಬಂದ ತರುವಾಯ ಪಕ್ಷ ನಡೆಸಿಕೊಂಡ ರೀತಿ ಬೇಸರ ತಂದಿತು. ಈ ಕುರಿತು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದೇನೆ. ಅವರು ಸಹ ತಪ್ಪಾಗಿರುವುದನ್ನು ಒಪ್ಪಿಕೊಂಡರು.

ಆದರೆ, ಸರಿಪಡಿಸಲು ಮುಂದಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಎಸ್‌. ಬಂಗಾರಪ್ಪ ಅವರ ಮೇಲೆ ಅಪಾರ ಗೌರವವನ್ನು ಹೊಂದಿದ್ದಾರೆ. ಅವರು ನಮ್ಮ ಕುಟುಂಬದ ಸದಸ್ಯರಿದ್ದಂತೆ. ಅವರು ಸಹ ತಾಲೂಕಿನ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ನೀಡಿರುವುದನ್ನು ಸ್ಮರಿಸುತ್ತೇನೆ.

Advertisement

ತಮ್ಮನ್ನು ಕಾಂಗ್ರೆಸ್‌ ಸೇರ್ಪಡೆಗೊಳಿಸುವ ಇಚ್ಛೆಯನ್ನು ಹೊಂದಿದ್ದರು ಎಂದ ಅವರು, ಎಸ್‌. ಬಂಗಾರಪ್ಪ ಅವರಿಗೆ ಕಾಂಗ್ರೆಸ್‌ ಎಲ್ಲ ರೀತಿಯ ಅ ಧಿಕಾರವನ್ನು ನೀಡುವ ಮೂಲಕ ಅನೇಕ ಜನಪರ ಹಾಗೂ ರೈತಪರವಾದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ನಾಂದಿ ಹಾಡಲಾಯಿತು. ತಾವು ಸಹ ಜೆಡಿಎಸ್‌ನಿಂದ ಶಾಸಕರಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರು ಅಭಿವೃದ್ಧಿಯ ದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ನೀಡುವ ಜೊತೆಗೆ ಅನುದಾನಗಳನ್ನು ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್‌ನ ಆನವಟ್ಟಿ ಬ್ಲಾಕ್‌ ಅಧ್ಯಕ್ಷ ಆರ್‌.ಸಿ. ಪಾಟೀಲ್‌ ಹಾಗೂ ಸೊರಬ ಬ್ಲಾಕ್‌ ಅಧ್ಯಕ್ಷ ಡಿ.ಬಿ. ಅಣ್ಣಪ್ಪ ಮಾತನಾಡಿದರು. ಮುಖಂಡರಾದ ಎಚ್‌. ಗಣಪತಿ, ಕೆ.ಪಿ. ರುದ್ರಗೌಡ, ಜಯಶೀಲಪ್ಪ, ಆಹ್ಮದ್‌ ಶರೀಫ್‌, ಪರಸಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next